BELTHANGADI
ಗಡಿಪಾರಾಗಿದ್ದ ರೌಡಿಶೀಟರ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಆರೋಪ….!!
ಬೆಳ್ತಂಗಡಿ ಮೇ 06: ಚುನಾವಣೆ ಹಿನ್ನಲೆ ಪೊಲೀಸ್ ಇಲಾಖೆ ಗಡಿಪಾರು ಮಾಡಿದ್ದ ರೌಡಿಶೀಟರ್ ಬೆಳ್ತಂಗಡಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾನೆ ಎಂದು ಸಾರ್ವಜನಿಕರು ಆರೋಪಿಸಲಾಗಿದ್ದು, ಇದೀಗ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೌಡಿಶೀಟರ್ ಆಗಿರುವ ಕೋಡಿಕೆರೆ ಲೋಕೇಶ್ ಯಾನೆ ಲೋಕು ಈತನನ್ನು ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಿದ್ದರು.
ಲೋಕೇಶ್ ಗುರುವಾರ ರಾತ್ರಿ ತಾಲ್ಲೂಕಿನ ಪುದುವೆಟ್ಟು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾನೆ ಎಂದು ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರಿಗೆ ದೂರು ನೀಡಿದ್ದರು. ಅವರು ಮಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಈ ವಿಷಯ ತಿಳಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗಕ್ಕೆ ಗಡಿಪಾರು ಮಾಡಲಾಗಿದ್ದ ಸುರತ್ಕಲ್ ಠಾಣಾ ವ್ಯಾಪ್ತಿಯ ಕೋಡಿಕೆರೆ ನಿವಾಸಿ ಲೋಕೇಶ್ ಶಿವಮೊಗ್ಗ ಬಿಟ್ಟು ಬೆಳ್ತಂಗಡಿ ಪರಿಸರದಲ್ಲಿ ಇರುವುದು ಕಂಡುಬಂತು. ಆದೇಶ ಉಲ್ಲಂಘಿಸಿದ ಕಾರಣ ಪೊಲೀಸರು ಈತನನ್ನು ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದು, ಬೇರೆ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಬಿಜೆಪಿ ಕಾರ್ಯಕರ್ತರ ಜತೆ ರೌಡಿಶೀಟರ್ ಲೋಕೇಶ್ ಇರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ‘ಲೋಕೇಶ್ ಪ್ರಚಾರಕ್ಕೆ ಬಂದಿದ್ದಾನೆಂಬ ದೂರು ಬಂದಿತ್ತು. ಆದರೆ, ಸ್ಥಳಕ್ಕೆ ಭೇಟಿ ನೀಡಿದಾಗ ಆತ ಅಲ್ಲಿ ಇರಲಿಲ್ಲ. ಸುರತ್ಕಲ್‌ನಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ’ ಎಂದರು.