DAKSHINA KANNADA
12 ಕೋಟಿ ಬೆಲೆಬಾಳುವ ರೋಲ್ಸ್ ರಾಯ್ಸ್ ಕಾರು ಖರೀದಿಸಿದ ಪುತ್ತೂರಿನ ಬಿಂದು ಜೀರಾ ಕಂಪೆನಿ ಮಾಲೀಕ ಸತ್ಯ ಶಂಕರ್

ಪುತ್ತೂರು ಮಾರ್ಚ್ 18: ಪುತ್ತೂರಿನಂತ ರಾಜ್ಯದ ಸಣ್ಣ ಪಟ್ಟಣದಲ್ಲೂ ಇದೀಗ ರೋಲ್ಸ್ ರಾಯ್ಸ್ ಕಾರು ಕಾಣಸಿಗುತ್ತಿದೆ. ಒಬ್ಬ ಆಟೋ ಡ್ರೈವರ್ ತಮ್ಮ ಶ್ರಮದಿಂದ ನೂರಾರು ಕೋಟಿ ವಹಿವಾಟು ನಡೆಸುವ ಕಂಪೆನಿ ಕಟ್ಟಿ ಇದೀಗ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದಾರೆ. ಇದು ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು. ಈ ಕಾರಿನ ಮಾಲೀಕ ಬೇರೆ ಯಾರು ಅಲ್ಲ, ಬಿಂದು ಜೀರಾ ಮಸಾಲಾ ಡ್ರಿಂಕ್ ಕಂಪನಿಯ ಮಾಲೀಕ ಸತ್ಯ ಶಂಕರ್.
ಬಿಂದು ಜೀರಾ ಹೆಸರು ಇಡೀ ದೇಶದಲ್ಲೇ ಮನೆಮಾತಾಗಿರುವ ಸಾಪ್ಟ್ ಡ್ರಿಂಕ್, ಒಂದು ಸಮಯದಲ್ಲಿ ಮುಖೇಶ್ ಅಂಬಾನಿ ಕಂಪೆನಿಯನ್ನ ಖರೀದಿಸಲು ಮುಂದಾಗಿ ಭಾರೀ ಸುದ್ದಿಯಾಗಿತ್ತು. ಇದೀಗ ಮತ್ತೆ ಬಿಂದು ಜೀರಾ ಕಂಪೆನಿ ಮಾಲೀಕ ಸುದ್ದಿಯಲ್ಲಿದ್ದು 12 ಕೋಟಿ ಬೆಲೆಬಾಳುವ ರೊಲ್ಸ್ ರಾಯ್ಸ್ ಕಾರು ಖರೀದಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಆಟೋ ಡ್ರೈವರ್ ಆಗಿದ್ದ ಸತ್ಯ ಶಂಕರ್ ಎಸ್‌ಜಿ ಗ್ರೂಪ್ ಸಂಸ್ಥೆ ಕಟ್ಟಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ. ಇದೀಗ ಸತ್ಯ ಶಂಕರ್ ಕಂಪನಿ 850 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಹೊಂದಿದೆ. ಆಟೋ ಡ್ರೈವರ್ ಆಗಿದ್ದ ಸತ್ಯ ಶಂಕರ್ ಇತ್ತೀಚೆಗೆ ಅತೀ ದುಬಾರಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಖರೀದಿಸಿದ್ದಾರೆ. ಕರ್ನಾಟಕದಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಆನ್ ರೋಡ್ ಬೆಲೆ ಸರಿಸುಮಾರು 11.30 ಕೋಟಿ ರೂಪಾಯಿ.

ಸತ್ಯ ಶಂಕರ್ ತಮ್ಮ ಪತ್ನಿ ಜೊತೆಯಲ್ಲಿ ತೆರಳಿ ಕಾರು ಡೆಲಿವರಿ ಪಡೆದುಕೊಂಡಿದ್ದಾರೆ. ವಿಶೇಷ ಅಂದರೆ ಸತ್ಯ ಶಂಕರ್ ಎಲಿಗೆಂಟ್ ಕಲರ್ ಆಯ್ಕೆ ಮಾಡಿದ್ದಾರೆ. ಇಂಟಿರಿಯರ್ ಬರ್ಗುಂಡಿ ಬಣ್ಣದಲ್ಲಿದೆ. ಅತ್ಯಾಕರ್ಷಕ, ಐಷಾರಾಮಿತನದ ಈ ಕಾರು ಇದೀಗ ಪುತ್ತೂರಿನಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಸತ್ಯ ಶಂಕರ್ ಕೆ ಈ ಕಾರನ್ನು ಕಸ್ಟಮೈಸ್ಡ್ ಆರ್ಡರ್ ಮಾಡಿದ್ದಾರೆ. ಹೀಗಾಗಿ ಈ ಕಾರಿನಲ್ಲಿ ಸತ್ಯ ಶಂಕರ್ ಅವರ ಹೆಸರು ಕೂಡ ಇದೆ.
ಆಟೋದಿಂದ ಅಂಬಾಸಿಡರ್ ಕಾರಿನ ಮೂಲಕ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಸತ್ಯ ಶಂಕರ್ ಹಂತ ಹಂತವಾಗಿ ಬೆಳೆದು ಬಂದಿದ್ದಾರೆ. ವಾಹನ ಬಿಡಿ ಭಾಗಗಳ ಮಾರಾಟ, ಟೈಯರ್ ಮಾರಾಟ, ಆಟೋಮೊಬೈಲ್ ಶಾಪ್ ತೆರೆದು ವ್ಯಾಪಾರ ಹೀಗೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡರು. ಇದರ ಬೆನ್ನಲ್ಲೇ ಪ್ರವೀಣ್ ಕ್ಯಾಪಿಟಲ್ಸ್ ಆರಂಭಿಸಿ ಆಟೋಮೊಬೈಲ್ ಹಣಕಾಸು, ಸಾಲ ಸೌಲಭ್ಯ ನೀಡಲು ಮುಂದಾದರು. ಬಳಿಕ ಹಂತ ಹಂತವಾಗಿ ತಮ್ಮ ಉದ್ಯಮ ಬೆಳೆಸಿ ಇದೀಗ ಸಾವಿರ ಕೋಟಿ ರೂಪಾಯಿಗೂ ಅಧಿಕ ಒಡೆಯನಾಗಿದ್ದಾರೆ.
ರೋಲ್ಸ್ ರಾಯ್ಸ್ ಫ್ಯಾಂಟಮ್ ವಿಶೇಷತೆಗಳೇನು:
ಈ ಕಾರು ರೂಪಾಂತರಗಳನ್ನು (ವೇರಿಯೆಂಟ್) ಅವಲಂಭಿಸಿ ಸರಿ ಸುಮಾರು ರೂ.8.99 ಕೋಟಿಯಿಂದ ರೂ.10.48 ಕೋಟಿ ಎಕ್ಸ್-ಶೋರೂಂ ಬೆಲೆಯನ್ನು ಹೊಂದಿದೆ. ಇದರ ಹೊರತಾಗಿ ಗ್ರಾಹಕರಿಗೆ ರೂ.11 ಕೋಟಿಯಿಂದ ರೂ.12 ಕೋಟಿ ಆನ್-ರೋಡ್ ದರದಲ್ಲಿ ಸಿಗುತ್ತದೆ. ಈ ಕಾರು ಶಕ್ತಿಯುತವಾದ 6.75-ಲೀಟರ್ ಟ್ವಿನ್ ಟರ್ಬೊ ವಿ12 ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 570 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 900 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದ್ದು, 9.8 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.