DAKSHINA KANNADA
ರಸ್ತೆ ಗುಂಡಿಗಳ ಸ್ಪರ್ಧೆ: ರಸ್ತೆ ಗುಂಡಿ ಪೋಟೋ ಕ್ಲಿಕ್ಕಿಸಿ,, ಬಹುಮಾನ ಗೆಲ್ಲಿರಿ

ಮಂಗಳೂರು, ಆಗಸ್ಟ್ 24: ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಆಡಳಿತ ವಿರೋಧಿಸುವ ಜತೆಗೆ ಸರ್ಕಾರದ ಗಮನ ಸೆಳೆಯಲು ‘ಸ್ಮಾರ್ಟ್ ಸಿಟಿ– ಮಾದರಿ ರಸ್ತೆ, ಗುಂಡಿಗಳ ಸ್ಪರ್ಧೆ–2022’ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಮಂಗಳವಾರ ಇಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮಹಾನಗರ ವ್ಯಾಪ್ತಿಯಲ್ಲಿರುವ ದೊಡ್ಡ ಮತ್ತು ಅಪಾಯಕಾರಿ ಗುಂಡಿಗಳನ್ನು ಗುರುತಿಸಿದವರಿಗೆ ಬಹುಮಾನ ನೀಡುವ ಮೂಲಕ ಜನಜಾಗೃತಿ ಮೂಡಿಸಲು ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಆ.24ರಿಂದ 29ರ ಸಂಝೆ 5 ಗಂಟೆಯ ಒಳಗೆ 9731485875 ಈ ಮೊಬೈಲ್ ಫೋನ್ ಸಂಖ್ಯೆಗೆ ಚಿತ್ರ, ಸಣ್ಣ ವಿಡಿಯೊ ಹಾಗೂ ಜಿಪಿಎಸ್ ಲೊಕೇಷನ್ ಕಳುಹಿಸಬಹುದು.

ಪ್ರಥಮ ಬಹುಮಾನವನ್ನು ಜಿಲ್ಲಾ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ ವತಿಯಿಂದ (₹ 5,000), ದ್ವಿತೀಯ ಬಹುಮಾನವನ್ನು ತ್ರಿಚಕ್ರ ಗೂಡ್ಸ್, ಟೆಂಪೊ ಮಾಲೀಕ, ಚಾಲಕರ ಸಂಘದ ವತಿಯಿಂದ (₹ 3,000), ತೃತೀಯ ಬಹುಮಾನವನ್ನು ಕುಲಶೇಖರ ಮಹಿಳಾ ದ್ವಿಚಕ್ರ ವಾಹನ ಚಾಲಕ, ಮಾಲೀಕರ ಪರವಾಗಿ (₹ 2,000) ನೀಡಲಾಗುವುದು’ ಎಂದರು.
ಗಿಲ್ಬರ್ಟ್ ಡಿಸೋಜ, ಮಹೇಶ್ ಕೋಡಿಕಲ್, ಅಬ್ದುಲ್ ಅಜೀಜ್ ಕುದ್ರೋಳಿ ಸ್ಪರ್ಧೆಯ ತೀರ್ಪುದಾರರಾಗಿದ್ದಾರೆ. ಆಯ್ಕೆಯಾದವರಿಗೆ ಆ.30ರಂದು ಮಧ್ಯಾಹ್ನ 3.30 ಗಂಟೆಗೆ ಪಾಲಿಕೆಯ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಕಚೇರಿಯ ಮುಂದೆ ಬಹುಮಾನ ವಿತರಿಸಲಾಗುವುದು ಎಂದರು. ಪ್ರಮುಖರಾದ ರಮಾನಂದ ಪೂಜಾರಿ, ಮಾರ್ಸೆಲ್ ಮೊಂತೆರೊ, ವಸಂತ ಶೆಟ್ಟಿ, ದೀಕ್ಷಿತ್ ಅತ್ತಾವರ, ಮೀನಾ ಟೆಲ್ಲಿಸ್ ಇದ್ದರು.