LATEST NEWS
ಸ್ಮಾರ್ಟ್ ಸಿಟಿ ರಸ್ತೆ ಗುಂಡಿ ಮುಚ್ಚಿದ ಸಂಚಾರಿ ಪೊಲೀಸ್ ಸಿಬ್ಬಂದಿ….!!

ಮಂಗಳೂರು ಜುಲೈ 22: ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ರಸ್ತೆಯಲ್ಲಿ ನಿರ್ಮಾಣವಾದ ಭಾರೀ ಗಾತ್ರದ ಗುಂಡಿಗಳನ್ನು ಮುಚ್ಚಲು ಸಂಚಾರಿ ಪೊಲೀಸರೇ ಬರಬೇಕಾದ ಪರಿಸ್ಥಿತಿ ಬಂದಿದ್ದು, ರಸ್ತೆಯ ಮಧ್ಯೆ ನಿರ್ಮಾಣವಾಗಿದ್ದ ಭಾರಿ ಗಾತ್ರದ ಗುಂಡಿಗಳನ್ನು ಮುಚ್ಚಿದ ಪೊಲೀಸರು ಸಾರ್ವಜನಿಕರ ಸಂಚಾರ ಸಂಕಟ ನಿವಾರಿಸಿದರು.
ನಗರದ ಹೃದಯ ಭಾಗದ ರಾವ್ ಆ್ಯಂಡ್ ರಾವ್ ವೃತ್ತದಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರು ರಸ್ತೆ ಗುಂಡಿಯನ್ನು ಮುಚ್ಚುತ್ತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಳೆ ಹಾಗೂ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಯಿಂದಾಗಿ ಬೃಹತ್ ಗಾತ್ರದ ಹೊಂಡ ನಿರ್ಮಾಣವಾಗಿತ್ತು, ಪಾಲಿಕೆಗೆ ಈ ಕುರಿತಂತೆ ಸಾರ್ವಜನಿಕರು ದೂರು ನೀಡಿದರೂ ಪಾಲಿಕೆ ಕಣ್ಮುಚ್ಚಿ ಕುಳಿತಿತ್ತು. ಕೊನೆಗೆ ವಾಹನ ಸವಾರರ ಸಂಕಷ್ಟ ನೋಡಿದ ಸಂಚಾರಿ ಪೊಲೀಸ್ ಸಿಬ್ಬಂದಿ ತಾವೇ ರಸ್ತೆ ಬದಿಯಲ್ಲಿದ್ದ ಇಂಟರ್ ಲಾಕ್ ಗಳನ್ನು ತಂದು ಹೊಂಡವನ್ನು ಮುಚ್ಚಿದ್ದಾರೆ. ಸ್ಥಳೀಯ ಸಾರ್ವಜನಿಕರು ಕೂಡ ಪೊಲೀಸ್ ಸಿಬ್ಬಂದಿಯವರ ಜೊತೆ ಕೈಜೊಡಿಸಿದರು.