DAKSHINA KANNADA
6 ಕೋಟಿ ವೆಚ್ಚದಲ್ಲಿ ದಕ್ಷಿಣ ಕನ್ನಡದ ಎರಡು ಪ್ರಮುಖ ರಸ್ತೆ ಅಭಿವೃದ್ದಿಗೆ ಗುದ್ದಲಿಪೂಜೆ ನೆರವೇರಿಸಿದ ಸಂಸದ ಕ್ಯಾ. ಚೌಟ

ಮಂಗಳೂರು ಎಪ್ರಿಲ್ 09: ಕೇಂದ್ರ ಸರ್ಕಾರದ ರಸ್ತೆ ಹಾಗೂ ಮೂಲಸೌಕರ್ಯ ನಿಧಿ(ಸಿಆರ್ಐಎಫ್)ಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಪ್ರಮುಖ ರಸ್ತೆಗಳನ್ನು ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.
ಸಿಆರ್ಐಎಫ್ ಅನುದಾನದಡಿ ಪುತ್ತೂರು ತಾಲೂಕಿನ ಪರ್ಲಡ್ಕ ಮಾರ್ಗವಾಗಿ ಹಾದು ಹೋಗುವ ಸುಬ್ರಹ್ಮಣ್ಯ-ಮಂಜೇಶ್ವರ ರಸ್ತೆಯನ್ನು ಸುಮಾರು 3.12 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 275ರಿಂದ ರಾಜ್ಯ ಹೆದ್ದಾರಿ 100ನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಒಟ್ಟು ಸುಮಾರು 5.20 ಕಿಮೀ. ಮಾರ್ಗವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಕಾಮಗಾರಿಗಳಿಗೆ ಮಂಗಳವಾರ ಸಂಸದ ಕ್ಯಾ. ಚೌಟ ಅವರು ಮಚ್ಚಿಮಲೆಯಲ್ಲಿ ಗುದ್ದಲಿಪೂಜೆ ನೆರವೇರಿಸಿದ್ದಾರೆ.

ಹಾಗೆಯೇ, ಕೇಂದ್ರ ಸರ್ಕಾರದ ಸಿಆರ್ಐಎಫ್ ನಿಧಿಯಡಿ ನಿಂತಿಕಲ್ಲು-ಬೆಳ್ಳಾರೆ-ನೆಟ್ಟಾರು, ಅಂಚಿನಡ್ಕ-ಕಾವು-ಈಶ್ವರಮಂಗಲ-ಪಲ್ಲತ್ತೂರು ರಸ್ತೆ ಕೂಡ ಸುಮಾರು 2.88 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಈ ರಸ್ತೆಯಲ್ಲಿ ಒಟ್ಟು 4.80ಕಿಮೀ. ಮಾರ್ಗವು ಶೀಘ್ರದಲ್ಲೇ ಅಭಿವೃದ್ಧಿಯಾಗಲಿದೆ. ಈ ಹಿನ್ನಲೆಯಲ್ಲಿ ಇಂದು ಅಂಚಿನಡ್ಕದಲ್ಲಿ ಕ್ಯಾ. ಚೌಟ ಅವರ ನೇತೃತ್ವದಲ್ಲಿ ಕಾಮಗಾರಿ ಆರಂಭಿಸುವುದಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಈ ಎರಡು ರಾಜ್ಯ ಮಟ್ಟದ ಹೆದ್ದಾರಿಗಳು ಅಭಿವೃದ್ಧಿಯಾದರೆ ಈ ಭಾಗದ ಹಾಗೂ ಕೇರಳ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ಸಂಚರಿಸುವ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸುಗಮ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶಿವಕುಮಾರ್ ಕೆ ಮತ್ತು ದಯಾನಂದ ಉಜಿರೆಮಾರ್, ಪಂಚಾಯತ್ ಅಧ್ಯಕ್ಷರು, ಬಿಜೆಪಿ ಸ್ಥಳೀಯ ಮುಖಂಡರು ಕಾರ್ಯಕ್ರಮದ ವೇಳೆ ಉಪಸ್ಥಿತರಿದ್ದರು.