FILM
250 ದಿನಗಳ ‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಮುಗಿಸಿದ ರಿಷಬ್ ಶೆಟ್ಟಿ

ಬೆಂಗಳೂರು, ಜುಲೈ 21: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ: ಚಾಪ್ಟರ್ 1’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಹರಿಬಿಟ್ಟು ಈ ವಿಚಾರವನ್ನು ಅಧಿಕೃತ ಮಾಡಿದೆ. ಈ ಸಿನಿಮಾದ ಅದ್ದೂರಿತನವನ್ನು ತೋರಿಸಲು ಮೇಕಿಂಗ್ ವಿಡಿಯೋ ಸಾಕ್ಷಿ ಒದಗಿಸಿದೆ. ಈ ಚಿತ್ರಕ್ಕೆ ಬರೋಬ್ಬರಿ 250 ದಿನಗಳ ಕಾಲ ಶೂಟಿಂಗ್ ನಡೆದಿದೆ. ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ಬರಲಿದೆ.
‘ರಾಜಕುಮಾರ’, ‘ಕೆಜಿಎಫ್’, ‘ಸಲಾರ್’, ‘ಕಾಂತಾರ’ದಂತಹ ಹಿಟ್ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್ ‘ಕಾಂತಾರ: ಚಾಪ್ಟರ್ 1’ ಕೈಗೆತ್ತಿಕೊಂಡಾಗ ಸಾಕಷ್ಟು ಕುತೂಹಲ ಮೂಡಿತ್ತು. ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುವ ಕೆಲಸವನ್ನು ಹೊಂಬಾಳೆ ಫಿಲ್ಮ್ಸ್ ಮಾಡುತ್ತಿದೆ. ಸಿನಿಮಾದ ಮೇಕಿಂಗ್ ವಿಡಿಯೋದಲ್ಲಿ ತಂಡದ ಶ್ರಮ ಎದ್ದು ಕಾಣಿಸಿದೆ.

3 ವರ್ಷಗಳ ಕಾಲ ರಿಷಬ್ ಹಾಗೂ ತಂಡ ‘ಕಾಂತಾರ: ಚಾಪ್ಟರ್ 1’ ಕೆಲಸದಲ್ಲಿ ತೊಡಗಿಕೊಂಡಿತ್ತು. ಅಷ್ಟೇ ಅಲ್ಲ, 250 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಸಾವಿರಾರು ಸಿಬ್ಬಂದಿ ಹಗಲಿರುಳು ದುಡಿದಿದ್ದಾರೆ. ಮೇಕಿಂಗ್ ವಿಡಿಯೋ ಮೂಲಕ ಚಿತ್ರ ಹೇಗಿರಲಿದೆ ಎಂಬುದರ ಝಲಕ್ ಸಿಕ್ಕಿದ್ದು ಫ್ಯಾನ್ಸ್ ಖುಷಿಪಟ್ಟಿದ್ದಾರೆ.
‘ಕಾಂತಾರ ಚಾಪ್ಟರ್ 1′ ಹೊಂಬಾಳೆ ಫಿಲ್ಮ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು ಎಂದರೂ ತಪ್ಪಾಗಲಾರದು. ಈ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಕಾಂತಾರ’ ಚಿತ್ರಕ್ಕೆ ಅವರು ನೀಡಿದ ಮ್ಯೂಸಿಕ್ ಗಮನ ಸೆಳೆದಿತ್ತು. ಈ ಚಿತ್ರದ ಮೂಲಕ ಅವರು ಮತ್ತೆ ಮೋಡಿ ಮಾಡುವ ಭರವಸೆಯಲ್ಲಿ ಇದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಾಹಣ, ವಿನೇಶ್ ಬಂಗ್ಲನ್ ಪ್ರೊಡಕ್ಷನ್ ಡಿಸೈನ್ ಚಿತ್ರಕ್ಕೆ ಇದೆ. ಈ ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ.
ಈ ಸಿನಿಮಾ ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಾಣಲಿದೆ. ಇದರಿಂದ ಸಿನಿಮಾ ತನ್ನ ಸಾಂಸ್ಕೃತಿಕ ಬೇರುಗಳನ್ನು ಉಳಿಸಿಕೊಂಡೇ ವಿವಿಧ ಭಾಷೆ ಮತ್ತು ಪ್ರದೇಶಗಳ ಪ್ರೇಕ್ಷಕರನ್ನು ತಲುಪಲಿದೆ.