LATEST NEWS
ಕ್ರಾಂತಿಕಾರಿ ಹೆಜ್ಜೆ ಇಟ್ಟ ಉಡುಪಿ ಶ್ರೀಕೃಷ್ಣ ಮಠ ಎಡೆಸ್ನಾನ ಮಡೆಸ್ನಾನ ಪದ್ದತಿಗಳಿಗೆ ವಿದಾಯ

ಕ್ರಾಂತಿಕಾರಿ ಹೆಜ್ಜೆ ಇಟ್ಟ ಉಡುಪಿ ಶ್ರೀಕೃಷ್ಣ ಮಠ ಎಡೆಸ್ನಾನ ಮಡೆಸ್ನಾನ ಪದ್ದತಿಗಳಿಗೆ ವಿದಾಯ
ಉಡುಪಿ ಡಿಸೆಂಬರ್ 13: ಉಡುಪಿ ಶ್ರೀಕೃಷ್ಣ ಮಠದ ಇತಿಹಾಸದಲ್ಲೆ ಪ್ರಥಮ ಬಾರಿಗೆ ಎಡೆಸ್ನಾನ ಹಾಗೂ ಮಡೆಸ್ನಾನ ಎರಡೂ ಪದ್ದತಿಗಳಿಗೆ ತಿಲಾಂಜಲಿ ಇಡಲಾಗಿದೆ. ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿಗಳು ಕ್ರಾಂತಿಕಾರಿ ಮತ್ತು ದಿಟ್ಟ ನಿರ್ಧಾರವನ್ನು ತೆಗೆದು ಕೊಂಡಿದ್ದು, ಈ ಬಾರಿಯಿಂದ ಷಷ್ಠಿಯಂದು ಮಠದ ಸುಬ್ರಹ್ಮಣ್ಯ ಗುಡಿಯ ಮುಂದೆ ಎಂಜಲೆಲೆಯ ಮಡೆಸ್ನಾನವೂ ಹಾಗೂ ದೇವರ ಪ್ರಸಾದ ಎಡೆಸ್ನಾನಕ್ಕೆರಡಕ್ಕೂ ವಿದಾಯ ಹೇಳಿದ್ದಾರೆ.
ಭಾರಿ ವಿವಾದಕ್ಕೊಳಗಾಗಿದ್ದ ಮಡೆಸ್ನಾನ ಹಾಗೂ ಎಡೆಸ್ನಾನ ಪದ್ದತಿಗಳ ವಿರುದ್ದ ಉಡುಪಿ ಕೃಷ್ಣ ಮಠದ ಪರ್ಯಾಯ ಪಲಿಮಾರು ಮಠಾಧೀಶರು ಮಹತ್ವದ ನಿರ್ಧಾರ ಕೈಗೊಂಡು ಎರಡೂ ಪದ್ದತಿಗಳಿಗೆ ವಿದಾಯ ಹೇಳಿದ್ದಾರೆ. ಈ ಮೂಲಕ ಪ್ರತಿವರ್ಷ ನಡೆಯುವ ವಿವಾದಕ್ಕೆ ಅಂತಿಮ ತೆರೆ ಎಳೆದಿದ್ದಾರೆ.

ಪ್ರತಿ ವರ್ಷ ಕೃಷ್ಣ ಮಠದ ಮಠದ ಸುಬ್ರಹ್ಮಣ್ಯ ಗುಡಿಯ ಮುಂದೆ ಎಂಜಲೆಲೆಯ ಮಡೆಸ್ನಾನವೂ ಹಾಗೂ ದೇವರ ಪ್ರಸಾದ ಎಡೆಸ್ನಾನ ನಡೆಯುತ್ತಿತ್ತು. ಆದರೆ ಮಡೆಸ್ನಾನದ ವಿರುದ್ದ ಹೋರಾಟಗಳು ಆರಂಭವಾದ ನಂತರ ಕೇವಲ ಎಡೆಸ್ನಾನ ನಡೆಯುತ್ತಿತ್ತು. ಆದರೆ ಈಗ ಎರಡನ್ನು ನಿಲ್ಲಿಸಲಾಗಿದ್ದರಿಂದ ಕೇವಲ ಉರುಳು ಸೇವೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಈ ಹಿನ್ನಲೆಯಲ್ಲಿ ಆಸಕ್ತ ಭಕ್ತರಿಂದ ಈ ಬಾರಿ ಕೇವಲ ಉರುಳುಸೇವೆ ಮಾತ್ರ ನಡೆದಿದೆ. ಉರುಳು ಸೇವೆ ಮಾಡಿದವರ ಸಂಖ್ಯೆಯೂ ಕಡಿಮೆಯಾಗಿತ್ತು. ಕಳೆದ ನಾಲ್ಕು ವರ್ಷದಿಂದ ಪೇಜಾವರ ಶ್ರೀಗಳ ಸಲಹೆಯಂತೆ ಮಠದಲ್ಲಿ ಎಡೆಸ್ನಾನ ನಡೆಯುತ್ತಿತ್ತು. ಆಗಲೇ ಭಕ್ತರ ಸಂಖ್ಯೆ ಕುಸಿದಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಪರ್ಯಾಯ ಪಲಿಮಾರು ಸ್ವಾಮೀಜಿಗಳು, ಅನಗತ್ಯ ವಿವಾದ ಬೇಡವೆಂದು ಈ ನಿರ್ಧಾರಕ್ಕೆ ಬಂದಿದ್ದೇವೆ. ಭಕ್ತರು ದೇವರಿಗೆ ಪ್ರದಕ್ಷಿಣೆ ಬಂದು ಅರ್ಚನೆ ಪೂಜೆ ಸಲ್ಲಿಸಲಿ. ಎಡೆಸ್ನಾನದಿಂದಲೂ ಕೆಲವರಿಗೆ ಬೇಸರವಾಗಿದೆ. ತಿನ್ನುವ ಅನ್ನದ ಮೇಲೆ ಉರುಳು ಸೇವೆ ಕೆಲವರಿಗೆ ಇಷ್ಟವಿಲ್ಲ. ಕೃಷ್ಣಮಠದ ಭೋಜನ ಶಾಲೆಯಲ್ಲೇ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪಲಿಮಾರು ಸ್ವಾಮಿಗಳ ನಿರ್ಧಾರವನ್ನು ಪೇಜಾವರ ಶ್ರೀಗಳು ಸ್ವಾಗತಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಪಲಿಮಾರು ಸ್ವಾಮಿಗಳ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಜಾತಿಯ ಹೆಸರಲ್ಲಿ ವಿರೋಧ ಬಂದ್ರೆ ಸಂಘರ್ಷವಾಗುತ್ತದೆ. ದೇವಸ್ಥಾನದಲ್ಲಿ ಮಡೆಸ್ನಾನ – ಎಡೆಸ್ನಾನ ಅನಿವಾರ್ಯ ಅಲ್ಲ. ಹಿಂದೂ ಧರ್ಮಕ್ಕೆ ಇದರಿಂದ ಯಾವುದೇ ಹಾನಿಯಿಲ್ಲ. ದೇವಸ್ಥಾನದ ಉತ್ಸವ ಪೂಜೆ ಶಾಸ್ತ್ರಬದ್ಧವಾಗಿ ನಡೆದರೆ ಸಾಕು. ವಿವಾದ ಭಿನ್ನಾಭಿಪ್ರಾಯದ ಆಚರಣೆಗಳು ನಿಂತರೆ ಹಿಂದೂ ಧರ್ಮಕ್ಕೆ ನಷ್ಟವಿಲ್ಲ. ಇಂತಹ ಆಚರಣೆ ನಡೆಯಬೇಕಾಗಿಲ್ಲವೆಂದು ಹೇಳಿದ್ದಾರೆ.