LATEST NEWS
ಸುರತ್ಕಲ್ – 4 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಂದಾಯ ನಿರೀಕ್ಷಕ
ಮಂಗಳೂರು ಡಿಸೆಂಬರ್ 19: ಆಸ್ತಿ ಪಹಣಿಗೆ ವಾರಸುದಾರರ ಹೆಸರನ್ನು ಸೇರ್ಪಡಿಸಲು 4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮುಲ್ಕಿ ಕಂದಾಯ ನಿರೀಕ್ಷಕರಾದ ಜಿ.ಎಸ್ ದಿನೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವ್ಯಕ್ತಿಯೊಬ್ಬರು ಮೃತಪಟ್ಟ ಅಜ್ಜಿಯ ಹೆಸರಿನಲ್ಲಿ ಆಸ್ತಿಯ ಪಹಣೆಗೆ ವಾರಸುದಾರರನ್ನು ಸೇರಿಸಲು ಕಳೆದ ವರ್ಷ ಮುಲ್ಕಿ ತಾಲೂಕು ತಹಶೀಲ್ದಾರ ರವರ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಸದರಿ ಅರ್ಜಿಯು ಮುಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗಾಗಿ ಕಳುಹಿಸಿದ್ದು, ಮುಲ್ಕಿ ಕಂದಾಯ ನಿರೀಕ್ಷಕರಾದ ಜಿ.ಎಸ್ ದಿನೇಶ್ ರವರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಇರಿಸಿಕೊಂಡಿದ್ದರು. ಈ ಬಗ್ಗೆ ಅರ್ಜಿ ಸಲ್ಲಿಸಿದ ದಿನಾಂಕ: 09-12-2024 ರಂದು ಅರ್ಜಿಯ ಬಗ್ಗೆ ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಲಾಗಿ ಮುಲ್ಕಿ ಕಂದಾಯ ನಿರೀಕ್ಷಕರಾದ ಜಿ.ಎಸ್ ದಿನೇಶ್ ರವರು ಆಸ್ತಿಗೆ ಸಂಬಂಧಿಸಿದ ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡಲು ರೂ 4 ಲಕ್ಷ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಆದರೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಈ ದಿನ ದಿನಾಂಕ 19.12.2024 ರ ಬೆಳಿಗ್ಗೆ ಮುಲ್ಕಿಯ ಕಂದಾಯ ನಿರೀಕ್ಷಕರಾದ ಶ್ರೀ ಜಿ.ಎಸ್ ದಿನೇಶ್ ರವರು ಪಿರ್ಯಾದಿದಾರರಿಂದ. ರೂ. 4 ಲಕ್ಷ ಲಂಚದ ಹಣವನ್ನು ಸ್ವೀಕರಿಸುವಾಗ ಸುರತ್ಕಲ್ ಜಂಕ್ಷನ್ ಬಳಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಸದರಿ ಅಧಿಕಾರಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಎಂ.ಎ ನಟರಾಜ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ, ಮಂಗಳೂರು ರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ॥ ಗಾನ ಪಿ ಕುಮಾರ್, ಪೊಲೀಸ್ ನಿರೀಕ್ಷಕರಾದ ಶ್ರೀ ಅಮಾನುಲ್ಲಾ.ಎ, ಶ್ರೀ ಸುರೇಶ್ ಕುಮಾರ್ ಪಿ, ಶ್ರೀ ಚಂದ್ರಶೇಖರ್ ಕೆ.ಎನ್ ಇವರು ಸಿಬ್ಬಂದಿಗಳ ಜೊತೆ ಟ್ರಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ