KARNATAKA
ನಿವೃತ್ತ ಹವಾಲ್ದಾರ್ ಪುತ್ರ 10ನೇ ತರಗತಿ ವಿದ್ಯಾರ್ಥಿ ಶೂಟ್ ಮಾಡಿಕೊಂಡು ಆತ್ಮಹತ್ಯೆ

ಬೆಂಗಳೂರು, ಸೆಪ್ಟೆಂಬರ್ 17 : ಎಸ್‍ಎಸ್‍ಎಲ್‍ಸಿ ಯಲ್ಲಿ ಶೇ.90ರಷ್ಟು ಅಂಕ ಗಳಿಸಿದ್ದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಇಂದು ಮುಂಜಾನೆ ನಡೆದಿದೆ.
ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತನನ್ನು ಆರ್ಮಿ ಸ್ಕೂಲ್ ನ ವಿದ್ಯಾರ್ಥಿ 17 ವರ್ಷದ ರಾಹುಲ್ ಭಂಡಾರಿ ಎಂದು ಗುರುತಿಸಲಾಗಿದೆ. ಬೆಳಗಿನಜಾವ 5:45ರ ಸುಮಾರಿಗೆ ಘಟನೆ ನಡೆದಿದೆ. ತಲೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಲೆಯ ಎಡಭಾಗಕ್ಕೆ ಗುಂಡು ಬಿದ್ದಿದ್ದು, ಬುಲೆಟ್ ಕೂಡ ಮೃತ ವ್ಯಕ್ತಿಯ 6 ಅಡಿ ಅಂತರದಲ್ಲಿ ಬಿದ್ದಿದೆ. ತಂದೆಯ ಪರವಾನಗಿ ಇರುವ ಪಿಸ್ತೂಲ್‍ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ರಾಹುಲ್ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.90ರಷ್ಟು ಅಂಕ ಗಳಿಸಿದ್ದ.

ಸದಾಶಿವನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ಅಧಿಕಾರಿಗಳು ಮತ್ತು ಡಾಗ್ ಸ್ಕ್ವಾಡ್ ಸ್ಥಳಕ್ಕೆ ಕರೆಸುವ ಸಿದ್ಧತೆ ನಡೆದಿದೆ. ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಸಹ ಆಗಮಿಸಿದ್ದಾರೆ. 3.2 ಎಂಎಂ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೋಷಕರು ಆಗಮಿಸಿ, ಕಣ್ಣೀರಿಟ್ಟಿದ್ದು, ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಇವತ್ತಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಇತ್ತು. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ, ರಾತ್ರಿ ಹೊತ್ತು ವಾಕಿಂಗ್ ಮಾಡುತ್ತಿದ್ದ. ಬೆಳಗ್ಗೆ 4 ಗಂಟೆಗೆ ಮನೆಯಿಂದ ವಾಕಿಂಗ್ ಬಂದಿದ್ದ. ಪ್ರತಿನಿತ್ಯ ವಾಕಿಂಗ್ ಮಾಡುತ್ತಿರಲಿಲ್ಲ. ಪರೀಕ್ಷೆಗೆ ಓದುತ್ತಿದ್ದ ಸಮಯದಲ್ಲಿ ವಿಶ್ರಾಂತಿಗಾಗಿ ವಾಕಿಂಗ್‍ಗೆ ಬರುತ್ತಿದ್ದ. ಬೆಳಗ್ಗೆ 6 ಗಂಟೆಯಿಂದ ಕರೆ ಮಾಡಿದರೂ ಸ್ವೀಕರಿಸಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.
ರಾತ್ರಿ ಊಟ ಮುಗಿಸಿ ಮನೆಯಲ್ಲೇ ಮಲಗಿದ್ದ ರಾಹುಲ್, ತಂದೆ, ತಾಯಿ ಮಲಗಿರುವಾಗ ನಾಲ್ಕು ಗಂಟೆಗೆ ಮನೆಯಿಂದ ಎದ್ದು ಹೊರಬಂದಿದ್ದಾನೆ. ಮಾನಸಿಕ ಒತ್ತಡದಲ್ಲಿದ್ದ ಎನ್ನುವ ಶಂಕೆ ಇದೆ. ಪ್ರತಿದಿನ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಓದಿಕೊಳ್ಳುತ್ತಿದ್ದ. ಮಾನಸಿಕ ಒತ್ತಡ ಹೆಚ್ಚಾದಾಗ ಎದ್ದು ವಾಕ್ ಬರುತ್ತಿದ್ದ. ಅದೇ ರೀತಿ ಇಂದು ಬೆಳಗಿನ ಜಾವ ಕೂಡ ಮನೆಯಿಂದ ಎದ್ದು ಹೊರಬಂದಿದ್ದಾನೆ. ನಾಲ್ಕು ಗಂಟೆಗೆ ಮನೆಯಿಂದ ತೆರಳಿದ್ದು, ವಾಕ್ ಮಾಡುತ್ತಾ ಬಂದಿದ್ದಾನೆ. ರಾಹುಲ್ 6 ಗಂಟೆಯಾದರೂ ಮರಳಿ ಬಾರದ್ದರಿಂದ ಪೋಷಕರು ನಿರಂತರವಾಗಿ ಕರೆ ಮಾಡಲು ಶುರು ಮಾಡಿದ್ದು, ಕರೆ ಸ್ವೀಕರಿಸಿಲ್ಲ.
ವಿದ್ಯಾರ್ಥಿ ರಾಹುಲ್ ಭಗತ್ ಸಿಂಗ್ ಹಾಗೂ ಬಾಬ್ನಾ ದಂಪತಿಯ ಪುತ್ರನಾಗಿದ್ದು, ಭಗತ್ ಸಿಂಗ್ ಅವರು ಸೇನೆಯ ನಿವೃತ್ತ ಹವಾಲ್ದಾರ್ ಆಗಿದ್ದಾರೆ. ಉತ್ತರಾಖಂಡ್ ಮೂಲದವರಾದ ಭಗತ್ ಸಿಂಗ್, ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆರ್.ಟಿ.ನಗರದ ಗಂಗಾ ಬೇಕರಿ ಬಳಿ ಮನೆ ಮಾಡಿಕೊಂಡು ವಾಸವಾಗಿದ್ದಾರೆ.