BELTHANGADI
ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಯುವಕನ ರಕ್ಷಣೆ ಮಾಡಿದ ಧರ್ಮಸ್ಥಳ ವಿಪತ್ತು ತಂಡದ ಸದಸ್ಯರು
ಬೆಳ್ತಂಗಡಿ ನವೆಂಬರ್ 15: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಜಲಾವೃತವಾದ ರಸ್ತೆಯಲ್ಲಿ ಕೊಚ್ಚಿಹೋಗುತ್ತಿದ್ದ ಸ್ಕೂಟರ್(scooter rescue) ಸವಾರನನ್ನು ಧರ್ಮಸ್ಥಳ ವಿಪತ್ತು ತಂಡದ ಸದಸ್ಯರು ರಕ್ಷಿಸಿರುವ ಘಟನೆ ನಡೆದಿದೆ.
ಕೊಕ್ಕಡ ಸಮೀಪದ ಪೆರಿಯಶಾಂತಿ ಎಂಬಲ್ಲಿ ಸ್ಕೂಟರ್ ಮೂಲಕ ನೀರು ತುಂಬಿದ ರಸ್ತೆಯಲ್ಲಿ ಪ್ರಯಾಣಿಸುತಿದ್ದ ವ್ಯಕ್ತಿಯೊಬ್ಬರು ರಸ್ತೆ ದಾಟಲು ಪ್ರಯತ್ನಿಸಿದಾಗ ನೀರಿನ ರಭಸಕ್ಕೆ ಸ್ಕೂಟರ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ.
ಈ ಸಂದರ್ಭ ಅದೇ ದಾರಿಯಲ್ಲಿ ಬಂದ ಬೆಳಾಲು ಉಜಿರೆ ಘಟಕದ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು, ಈತ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿ, ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಕೂಟರ್ ಅನ್ನು ಹಗ್ಗ ಕಟ್ಟಿ ಮೇಲೆ ಎತ್ತಿದ್ದಾರೆ.ಇನ್ನು ಸ್ಕೂಟರ್ ಸವಾರ ನಿಡ್ಲೆ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ. ಕಾರ್ಯಾಚರಣೆಯಲ್ಲಿ ಬೆಳಾಲು ಘಟಕದ ಸ್ವಯಂಸೇವಕರಾದ ಹರೀಶ್, ಯಶೋಧರ, ಸಂತೋಷ್, ರವೀಂದ್ರ ಸೇರಿದಂತೆ 6 ಮಂದಿ ಪಾಲ್ಗೊಂಡಿದ್ದರು. ಇವರ ಈ ತುರ್ತು ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.