Connect with us

LATEST NEWS

ರಿಲಯನ್ಸ್ ಜಿಯೋ ಮೊದಲ ತ್ರೈಮಾಸಿಕ ಲಾಭ 5,445 ಕೋಟಿ ರೂಪಾಯಿ, ಮುಂದಿನ ವರ್ಷ IPO ಸಾಧ್ಯತೆ

ಮುಂಬೈ, ಜುಲೈ 19: ರಿಲಯನ್ಸ್ ಜಿಯೋದ 2024-25ನೇ ಸಾಲಿನ ಪ್ರಥಮ ತ್ರೈಮಾಸಿಕದ, ಅಂದರೆ ಏಪ್ರಿಲ್ ನಿಂದ ಜೂನ್ ತಿಂಗಳ ತನಕದ ಹಣಕಾಸು ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಕಳೆದ ತ್ರೈಮಾಸಿಕದಲ್ಲಿ 5,337 ಕೋಟಿ ರೂಪಾಯಿಯ ನಿವ್ವಳ ಲಾಭ ಘೋಷಿಸಿದ್ದ ಕಂಪನಿಯು ಈ ತ್ರೈಮಾಸಿಕದಲ್ಲಿ 5,445 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದೆ.

ರಿಲಯನ್ಸ್ ಜಿಯೋ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತೆ ಮುಂದುವರಿದಿದೆ. ಜೂನ್ ಗೆ ಕೊನೆಯಾದ ತ್ರೈಮಾಸಿಕದಲ್ಲಿ 90 ಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಅಂದ ಹಾಗೆ ವರ್ಷದ ಹಿಂದಿನ ಇದೇ ಹಣಕಾಸು ತ್ರೈಮಾಸಿಕದಲ್ಲಿ ಜಿಯೋ 4,863 ಕೋಟಿ ರೂಪಾಯಿ ಲಾಭ ಗಳಿಸಿತ್ತು.

 

ಕಾರ್ಯಾಚರಣೆ ಮೂಲಕ ಬರುವಂಥ ಆದಾಯವು 26,478 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಮೂಲಕವಾಗಿ 25,959 ಕೋಟಿ ರೂಪಾಯಿ ಆದಾಯ ಬಂದಿತ್ತು. ವರ್ಷದ ಹಿಂದಿನ ಇದೇ ಅವಧಿಯಲ್ಲಿ 24,042 ಕೋಟಿ ರೂಪಾಯಿ ಕಾರ್ಯಾಚರಣೆ ಮೂಲಕ ಆದಾಯ ಪಡೆದದ್ದನ್ನು ಇಲ್ಲಿ ಉಲ್ಲೇಖಿಸಬಹುದು.

 

ಇನ್ನು ತಿಂಗಳಿಗೆ ಪ್ರತಿ ಬಳಕೆದಾರರಿಂದ ಬರುವಂಥ ಸರಾಸರಿ ಆದಾಯದಲ್ಲಿ, ಅಂದರೆ ಇದನ್ನು ಎಆರ್ ಪಿಯು (ಆವರೇಜ್ ರೆವಿನ್ಯೂ ಪರ್ ಯೂಸರ್) ಎನ್ನಲಾಗುತ್ತದೆ. ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯ ಹಾಗೂ ಇಬಿಐಟಿಡಿಎ ಬೆಳವಣಿಗೆಗೆ ಇದು ಕೊಡುಗೆ ನೀಡಿದೆ.

 

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಟೆಲಿಕಾಂ ಘಟಕವಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ 2025ನೇ ಇಸವಿಯಲ್ಲಿ ಅತಿದೊಡ್ಡ ಐಪಿಒಗೆ (ಇನಿಷಿಯಲ್ ಪಬ್ಲಿಕ್ ಆಫರ್) ಮುಂದಾಗಬಹುದು. 9.3 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವ್ಯ ಮೌಲ್ಯಮಾಪನದೊಂದಿಗೆ ಇದು ಆಗಬಹುದು ಎಂದು ಜೆಫರೀಸ್ ಟಿಪ್ಪಣಿ ಹೇಳಿದೆ.

 

ಜಿಯೋ ‘$112 ಶತಕೋಟಿ ಮೌಲ್ಯದಲ್ಲಿ ಲಿಸ್ಟಿಂಗ್ ಮಾಡಬಹುದು’ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರು ಬೆಲೆಗೆ ‘ಶೇ 7ರಿಂದ 15ರಷ್ಟು ಮೇಲಕ್ಕೆ’ ಸೇರಿಸಬಹುದು ಎಂದು ಜೆಫ್ರೀಸ್ ಜುಲೈ 11 ರಂದು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

 

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಮಾರುಕಟ್ಟೆ ವ್ಯವಹಾರ ಶುಕ್ರವಾರದಂದು ಕೊನೆಗೊಂಡ ವೇಳೆಗೆ ಪ್ರತಿ ಷೇರಿಗೆ 3,116.95 ರೂಪಾಯಿಯಂತೆ ಮುಕ್ತಾಯ ಕಂಡಿವೆ. ಷೇರಿನ ಮೌಲ್ಯ ಶೇ 1.78ರಷ್ಟು ಇಳಿಕೆ ಕಂಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *