DAKSHINA KANNADA
ರಿಲ್ಯಾಕ್ಸ್ ಮೂಡ್ ನಲ್ಲಿ ಪೇಜಾವರ ಶ್ರೀಗಳು… ಸಾವಯವ ತೋಟದಲ್ಲಿ ಒಂದು ಪ್ರದಕ್ಷಿಣೆ
ಮೂಡಬಿದಿರೆ, ಮಾರ್ಚ್ 12: ಕಳೆದ ಆರೇಳು ತಿಂಗಳನಿಂದ ಎಡೆಬಿಡದ ದೇಶ ಸಂಚಾರ , ರಾಮಮಂದಿರ ನಿಧಿ ಸಂಗ್ರಹ ಅಭಿಯಾನವೇ ಮೊದಲಾಗಿ ಅತ್ಯಂತ ಬ್ಯುಸಿಯಾಗಿದ್ದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಳೆದೆರಡು ಮೂರು ದಿನಗಳಲ್ಲಿ ಒಂದಷ್ಟು ರಿಲ್ಯಾಕ್ಸ್ ಮೂಡ್ ನಲ್ಲಿದ್ದರು.
ಎರಡು ದಿನಗಳ ನಿರ್ಜಲ ಏಕಾದಶಿಯೂ ಬಂದಿದ್ದರಿಂದ ಮೂಡಬಿದಿರೆ ಸಮೀಪದ ಕೆಲ್ಲಪುತ್ತಿಗೆಯ ಪ್ರಸಿದ್ಧ ವೈದಿಕರಾದ ಅನಂತಕೃಷ್ಣ ಅಡಿಗರ ತೋಟದ ಮನೆಯಲ್ಲಿ ಅವರ ಆಹ್ವಾನದ ಮೇರೆಗೆ ವಾಸ್ತವ್ಯವಿದ್ದು ತಮ್ಮ ವಿದ್ಯಾರ್ಥಿಗಳಿಗೆ ಯಾವುದೇ ಕಾರ್ಯಕ್ರಮಗಳ ಒತ್ತಡವಿಲ್ಲದೇ ಸುಧಾ ಪಾಠ ಮಾಡಿದರು . ಬುಧವಾರ ಸಂಜೆ ಮೂಡಬಿದಿರೆ ಜೈನ ಮಠ ಮತ್ತು ಸಾವಿರ ಕಂಬದ ಬಸದಿಯ ಸೊಬಗನ್ನು ಕಣ್ತುಂಬಿಕೊಂಡರು.
ಗುರುವಾರ ನಸುಮುಂಜಾನೆ ಪಟ್ಟದ ದೇವರ ಪೂಜೆ ನೆರವೇರಿಸಿ ಎರಡು ದಿನಗಳ ಏಕಾದಶಿ ಉಪವಾಸ ವ್ರತ ಕೃಷ್ಣಾರ್ಪಣಗೊಳಿಸಿದರು. ಭಿಕ್ಷೆ ಸ್ವೀಕರಿಸಿದ ಬಳಿಕ ಮಹಾಶಿವರಾತ್ರಿ ನಿಮಿತ್ತ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಳ ಮತ್ತು ಕಡಂದಲೆ ದೇವಳಗಳಿಗೆ ಭೇಟಿ ನೀಡಿ ಲೋಕದೊಳಿತಿಗೆ ಮಹರುದ್ರ ದೇವರಲ್ಲಿ ಪ್ರಾರ್ಥಿಸಿದರು.
ಅಲ್ಲಿಂದ ಕಾರ್ಕಳ ಇರ್ವತ್ತೂರಿನ ಯುವ ಸಾವಯವ ಕೃಷಿಕ , ಪ್ರಸಿದ್ಧ ಧಾರ್ಮಿಕ ಮುಂದಾಳು ಶ್ರೀನಿವಾಸ ಭಟ್ಟರ ಮನೆಗೆ ಭೇಟಿ ನೀಡಿ ಗುರುಪೂಜೆ ಸ್ವೀಕರಿಸಿ , ಗೋಪೂಜೆ ನೆರವೇರಿಸಿದರು . ಭಟ್ಟರ ಸಂಪೂರ್ಣ ಸಾವಯವ ತೋಟಕ್ಕೆ ಸಂಪೂರ್ಣ ಪ್ರದಕ್ಷಿಣೆ ಬಂದು ಭಟ್ಟರು ನಡೆಸುತ್ತಿರುವ ಕೃಷಿ ಮತ್ತು ದೇಶಿ ತಳಿ ಗೋವುಗಳ ಹೈನುಗಾರಿಕೆ , ಅತ್ಯಾಧುನಿಕ ಗೋಬರ್ ಗ್ಯಾಸ್ ವ್ಯವಸ್ಥೆಗಳ ಬಗೆಗೆ ಪೂರ್ಣ ಮಾಹಿತಿಗಳನ್ನು ಆಸಕ್ತಿಯಿಂದ ಕೇಳಿ ಪಡೆದರು.
ಶ್ರೀನಿವಾಸ ಭಟ್ ಮತ್ತು ಮನೆಯವರ ಶ್ರಮ ಮತ್ತು ಕೃಷಿಯ ಆಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಟ್ಟರ ಮನೆಮಂದಿ ಶ್ರೀಗಳನ್ನು ಗೌರವಿಸಿದರು. ಅಲ್ಲಿಂದ ರೆಂಜಾಳ ಗ್ರಾಮದ ಪ್ರಸಿದ್ಧ ಪುರೋಹಿತರಾದ ಗುರುರಾಜ ಉಪಾಧ್ಯಾಯರ ಮನೆಗೆ ತೆರಳಿದರು .