LATEST NEWS
ಉಡುಪಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ಉಡುಪಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ
ಮಂಗಳೂರು ಅಗಸ್ಟ್ 14: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹಪೀಡಿತವಾಗಿದ್ದ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ. ಇಂದು ಮಧ್ಯಾಹ್ನ ದಿಂದ ನಾಳೆಯವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಈಗಾಗಲೇ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಹವಮಾನ ಇಲಾಖೆ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಭಾರೀ ಮಳೆ ಹಿನ್ನೆಲೆ ಗುಡ್ಡ ಕುಸಿತ ಎದುರಾಗುವ ಸಾಧ್ಯತೆ ಇರುವುದಿಂದ ಬೆಟ್ಟ, ಗುಡ್ಡಗಳ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಸ್ಥಳಾಂತರಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಅಲ್ಲದೆ ತಗ್ಗು ಪ್ರದೇಶಗಳಲ್ಲಿ ನೆರೆಯ ಭೀತಿ ಕಾಡುವ ಸಾಧ್ಯತೆ ಇದೆ. ನದಿ ತೀರದ ಜನ ಮುಂಜಾಗ್ರತೆ ವಹಿಸಲು ಕೂಡ ಎಚ್ಚರಿಸಲಾಗಿದೆ. ಜಿಲ್ಲೆಗೆ ಆಗಮಿಸಿರುವ ಪ್ರವಾಸಿಗಳು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಆದೇಶಿಸಿದೆ.
ಈ ನಡುವೆ ಉಡುಪಿಯಲ್ಲಿ ಸುರಿದ ಭಾರಿ ಮಳೆ, ಕಡಲ ಅಬ್ಬರಕ್ಕೆ ಇಬ್ಬರು ಮೀನುಗಾರರು ಬಲಿಯಾಗಿದ್ದಾರೆ. ಮಲ್ಪೆ ಮತ್ತು ಕಾಪು ಕಡಲ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದಾರೆ.
ಕಾಪು ಸಮೀಪದ ಉಳಿಯಾರಗೋಳಿಯ ನಿವಾಸಿ ಸಂಜೀವ ಕೋಟ್ಯಾನ್(55) ಮತ್ತು ಉದ್ಯಾವರ ಪಿತ್ರೋಡಿಯ ನಿವಾಸಿ ಗೋವರ್ಧನ್ ಕುಂದರ್(42) ಮೃತಪಟ್ಟ ಮೀನುಗಾರರು. ಅರಬ್ಬೀ ಸಮುದ್ರದಲ್ಲಿ ಸಂಜೀವ ಇತರೆ ಮೀನುಗಾರರ ಜೊತೆ ಮೀನುಗಾರಿಕೆಗೆ ತೆರಳಿದ್ದರು. ಪಡುಬಿದ್ರೆ ಕಡಲ ಕಿನಾರೆಯಿಂದ ಎರಡು ಕಿ.ಮೀ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಡಲ ಅಲೆಗೆ ಸಿಲುಕಿ ಸಂಜೀವ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಪು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಮಲ್ಪೆ ಕಡಲಲ್ಲಿ ಗೋವರ್ಧನ್ ಟ್ರಾಲ್ ಬೋಟ್‍ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮಲ್ಪೆ ಲೈಟ್ ಹೌಸ್ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಒಮ್ಮೆಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಜೊತೆಗೆ ಇದ್ದವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಗೋವರ್ಧನ್ ಸಾವನ್ನಪ್ಪಿದ್ದರು. ಸದ್ಯ ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.