Connect with us

    DAKSHINA KANNADA

    ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಬಗ್ಗೆ ದ.ಕ. ಜಿಲ್ಲಾ ರಾಜಕೀಯ ನಾಯಕರು ಏನಂತಾರೆ..!!?

    ಮಂಗಳೂರು : ಕೇಂದ್ರ ಸರ್ಕಾರ ಮಂಗಳವಾರ ಮಂಡಿಸಿದ ಬಜೆಟ್ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ರಾಜಕೀಯ ನಾಯಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಕೆ.ಹರೀಶ್ ಕುಮಾರ್
    (ಅಧ್ಯಕ್ಷರು, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ)

    “ಬಜೆಟ್ ನಲ್ಲಿ ತಾರತಮ್ಯ ಹೆಚ್ಚಾಗಿದ್ದು, ಪ್ರಜಾಪ್ರಭುತ್ವ ವಿರೋಧಿ ಬಜೆಟ್ ಆಗಿದೆ. ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟ ಪಕ್ಷಗಳ ಆಡಳಿತ ರಾಜ್ಯಗಳಿಗೆ ಮಾತ್ರ ನೆರವು ನೀಡುವ ಬಜೆಟ್ ಆಗಿದ್ದು, ಇಂಡಿಯಾ ಒಕ್ಕೂಟದ ಪ್ರಭಾವವಿರುವ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿಲ್ಲ. ಈ ಹಿಂದಿನ ಯುಪಿಎ ನೇತೃತ್ವದ ಮನಮೋಹನ್ ಸಿಂಗ್ ಅವರ ಸರಕಾರ ಮಂಡಿಸಿರುವ ಎಲ್ಲ ಬಜೆಟ್ ಗಳು ರಾಜಕೀಯ ಉದ್ದೇಶಹೊಂದಿರದೆ ಆರ್ಥಿಕ ಅಭಿವೃದ್ಧಿ ಮತ್ತು ದೂರದೃಷ್ಟಿಯನ್ನು ಹೊಂದಿತ್ತು. ಎನ್ ಡಿಎ ರಾಜಕೀಯ ಸಲುವಾಗಿ ಬಜೆಟ್ ಮಂಡಿಸಿದೆ. ಒಟ್ಟಾರೆ ರಾಜಕೀಯ ಸರ್ಕಸ್ಸಿನ ಬಜೆಟ್.”

    ಮಂಜುನಾಥ ಭಂಡಾರಿ
    (ಶಾಸಕರು, ಕರ್ನಾಟಕ ವಿಧಾನ ಪರಿಷತ್
    ಕಾರ್ಯಾಧ್ಯಕ್ಷರು, ಕೆಪಿಸಿಸಿ)
    “ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಮೇಕೆದಾಟು ಯೋಜನೆಗೆ ಅನುಮತಿ ಇಲ್ಲ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವಿಲ್ಲ. ಒಟ್ಟಿನಲ್ಲಿ ರಾಜ್ಯಕ್ಕೆ ಈ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕರ್ನಾಟಕ್ಕೆ ಚೊಂಬು ನೀಡಿದೆ. ಬಜೆಟ್‌ನಲ್ಲಿ ರೈತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಇಲ್ಲ. ದೇಶದ ಮಹಿಳೆಯರು, ರೈತರು ಹಾಗೂ ಯುವಜನತೆಯ ಭವಿಷ್ಯದ ಮೇಲೆ ನೇರವಾಗಿ ಸಕಾರಾತ್ಮಕ ಪರಿಣಾಮ ಬೀರುವ ಯಾವುದೇ ಗುಣಾತ್ಮಕ ಸಂಗತಿಗಳನ್ನು ಈ ಬಜೆಟ್‌ ಹೊಂದಿಲ್ಲ.”

    ಎನ್‌ಎಡಿಎ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ 

    ಬಿ ರಮಾನಾಥ ರೈ, ಮಾಜಿ ಸಚಿವರು

    ”ಇದು ದೇಶದ ಬಜೆಟ್ ಎಂದು ಅನಿಸುತ್ತಿಲ್ಲ. ಮೋದಿ‌ ಸರಕಾರ ತನ್ನ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಬಿಹಾರ, ಆಂಧ್ರಪ್ರದೇಶಕ್ಕೆ‌ ಬಜೆಟ್‌ನಲ್ಲಿ‌ ಸಿಂಹಪಾಲು ಕೊಟ್ಟಿದ್ದು ಬಿಜೆಪಿಯೇತರ ರಾಜ್ಯಗಳನ್ನು ಕಡೆಗಣಿಸಿದೆ. ಎನ್‌ಡಿಎ ಸರಕಾರಕ್ಕೆ 17+2 ಸಂಸದರನ್ನು ನೀಡಿರುವ ಕರ್ನಾಟಕಕ್ಕೆ ಮತ್ತೊಮ್ಮೆ ಮೋದಿ ಸರಕಾರ ಖಾಲಿ ಚೊಂಬು ಕೊಟ್ಟು‌ಅನ್ಯಾಯ ಮಾಡಿದೆ. ಕರ್ನಾಟಕಕ್ಕೆ ಈ ಬಜೆಟ್‌ನಲ್ಲಿ‌ ಸಿಕ್ಕಿರುವುದು ಶೂನ್ಯ. ಈ ರೀತಿ ಕರ್ನಾಟಕವನ್ನು ಯಾರೂ ಕಡೆಗಣಿಸಿರಲಿಲ್ಲ.
    ನೆನೆಗುದಿಗೆ ಬಿದ್ದಿರುವ ರಾಜ್ಯದ ಹಲವು ನೀರಾವರಿ ಯೋಜನೆ ಮತ್ತು ರೈಲ್ವೇ ಯೋಜನೆಗಳ ಪೈಕಿ ಯಾವುದೇ ಯೋಜನೆಗಳಿಗೂ ನಯಾಪೈಸೆ ಅನುದಾನ ಕೊಟ್ಟಿಲ್ಲ. ರಾಜ್ಯಕ್ಕೆ ಒಂದೇ ಒಂದು ಹೊಸ ಯೋಜನೆ ಘೋಷಿಸಿಲ್ಲ,. ಬಿಜೆಪಿಯನ್ನು ಸತತ ಮೂರು ದಶಕಗಳಿಂದ ಗೆಲ್ಲಿಸುತ್ತಿರುವ ಕರಾವಳಿಗೂ ಈ ಬಜೆಟ್‌ನಲ್ಲಿ ದ್ರೋಹ ಆಗಿದೆ.‌ ಮಂಗಳೂರನ್ನು ಪ್ರತ್ಯೇಕ ರೈಲ್ವೇ ವಿಭಾಗ ಮಾಡುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಮಂಗಳೂರಿನ ರೈಲ್ವೇ ಜಾಲವನ್ನು ನೈಋತ್ಯ ರೈಲ್ವೆಗೆ ಸೇರಿಸಬೇಕೆಂಬ ಬೇಡಿಕೆಯನ್ನೂ ಈಡೇರಿಸಿಲ್ಲ.
    ನಿಸ್ಸಂಶಯವಾಗಿ ಈ ಬಜೆಟ್ ಕರ್ನಾಟಕಕ್ಕೆ ಮಹಾ ದ್ರೋಹ ಎಸಗಿದ ಬಜೆಟ್ ಎಂದು ಇತಿಹಾಸದಲ್ಲಿ‌ ದಾಖಲಾಗಲಿದೆ.”

    ನಿರುದ್ಯೋಗಕ್ಕೆ ಶಾಶ್ವತ ಪರಿಹಾರವಿಲ್ಲ, ಎನ್‌ಡಿಎಯೇತರ ರಾಜ್ಯಗಳ ಕಡೆಗೆ ನಿರ್ಲಕ್ಷ್ಯ. ವಾರ್ಷಿಕ ಬಜೆಟ್ ದೇಶದ ನೈಜ ಸಮಸ್ಯೆಗಳನ್ನು ಪರಿಹರಿಸಲು ವಿಫಲ:

    ಡಿವೈಎಫ್ಐ

    ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ ನಲ್ಲಿ ಮಂಡಿಸಿದ 2024-25 ರ ಆರ್ಥಿಕ ವರ್ಷದ ವಾರ್ಷಿಕ ಬಜೆಟ್‌ನ ಸ್ವರೂಪದ ಬಗ್ಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಯು ಆಘಾತವನ್ನು ವ್ಯಕ್ತಪಡಿಸುತ್ತದೆ.ಇದು ದೇಶದ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ ಮತ್ತು ಸಂವಿಧಾನದ ಮೂಲಭೂತ ತತ್ವಗಳಾದ ಫೆಡರಲಿಸಂ ಅನ್ನು ಉಲ್ಲಂಘಿಸುತ್ತದೆ. ಆರ್ಥಿಕ ಸಮೀಕ್ಷಾ ವರದಿಯು ದೇಶವು ನಿರುದ್ಯೋಗ ಸಮಸ್ಯೆಯನ್ನು ಎದುರಿಸಲು ಸಾಧ್ಯವಾಗಲು ಕೃಷಿಯೇತರ ವಲಯದಲ್ಲಿ ವಾರ್ಷಿಕವಾಗಿ ಸುಮಾರು 78.51 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಸೂಚಿಸುತ್ತದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ವಾರ್ಷಿಕ ಬಜೆಟ್ ಅನ್ನು ಆ ಹಿನ್ನೆಲೆಯಲ್ಲಿ ನೋಡಬೇಕು. ಬಜೆಟ್‌ನಲ್ಲಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಹೇಳಬೇಕಿದ್ದಂತೆ ಇಲ್ಲ. ದೇಶದ ಯುವಕರಿಗೆ ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡಲು ಬಜೆಟ್ ಪ್ರಸ್ತಾಪಿಸಿದೆ. ಕಳೆದ ಹಲವಾರು ವರ್ಷಗಳಿಂದ ನಿರುದ್ಯೋಗದಿಂದ ಬಳಲುತ್ತಿರುವ ದೇಶದ ವಿದ್ಯಾವಂತ ಯುವಕರು ಇಂಟರ್ನ್‌ಶಿಪ್ ಅವಕಾಶಗಳನ್ನು ಹುಡುಕುತ್ತಿಲ್ಲ, ಬದಲಾಗಿ ಉದ್ಯೋಗಕ್ಕಾಗಿ ಹಂಬಲಿಸುತ್ತಿದ್ದಾರೆ. ಆದರೆ ಈ ಬಜೆಟ್ ದೇಶದ ನಿರುದ್ಯೋಗಿ ಯುವಕರ ಸಂಕಷ್ಟವನ್ನು ತಮಾಷೆ ಮಾಡುವಂತಿದೆ ಎಂದು ಡಿವೈಎಫ್ಐ ಅಪಾದಿಸಿದೆ.ಸಾರ್ವಜನಿಕರಿಗೆ ಮೂಲಸೌಕರ್ಯ ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರಿಂದ ನಿಜವಾದ ಪರಿಹಾರವನ್ನು ಒದಗಿಸಬೇಕು. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಮಾಡುವ ಬದಲು ಸರಕಾರ ಸುಳ್ಳು ಭರವಸೆಗಳನ್ನು ನೀಡುವುದರಲ್ಲಿ ನಿರತವಾಗಿದೆ ಎಂಬುದನ್ನು ಈ ಬಜೆಟ್ ತೋರಿಸುತ್ತಿದೆ.ವಿವಿಧ ಆರ್ಥಿಕ ಚಟುವಟಿಕೆಗಳಲ್ಲಿ ಕೃತಕ ಬುದ್ಧಿಮತ್ತೆ ಹೆಚ್ಚು ಪ್ರಚಲಿತವಾಗುತ್ತಿದ್ದಂತೆ, ಸಾಮೂಹಿಕ ಕಲ್ಯಾಣದ ಕಡೆಗೆ ತಾಂತ್ರಿಕ ಆಯ್ಕೆಗಳನ್ನು ನಡೆಸುವುದು ನಿರ್ಣಾಯಕವಾಗಿದೆ ಎಂದು ಅರ್ಥಿಕ ಸಮೀಕ್ಷೆಯು ಸೂಚಿಸುತ್ತದೆ. ಉದ್ಯೋಗದಾತರು ನಿಯೋಜಿಸುವ ತಂತ್ರಜ್ಞಾನ ಮತ್ತು ಕಾರ್ಮಿಕರನ್ನು ಸಮತೋಲನಗೊಳಿಸಬೇಕು. ಕೃಷಿ-ಸಂಸ್ಕರಣೆ ಮತ್ತು ಆರ್ಥಿಕತೆಯು ಗುಣಮಟ್ಟದ ಉದ್ಯೋಗವನ್ನು ಸೃಷ್ಟಿಸಲು ಮತ್ತು ಉಳಿಸಿಕೊಳ್ಳಲು ಭರವಸೆಯ ಕ್ಷೇತ್ರಗಳಾಗಿವೆ ಎಂದು ಅದು ಸೂಚಿಸುತ್ತದೆ. ಆದರೆ ಇಂದು ಮಂಡಿಸಿದ ಬಜೆಟ್‌ನಲ್ಲಿ ಈ ಕ್ಷೇತ್ರಗಳಿಗೆ ಕೇಂದ್ರ ಸರಕಾರ ಅಷ್ಟೊಂದು ಒತ್ತು ನೀಡಿಲ್ಲ.ವಿರೋಧ ಪಕ್ಷಗಳ ಆಡಳಿತದಲ್ಲಿರುವ ವಿವಿಧ ರಾಜ್ಯಗಳನ್ನು ನಿರ್ಲಕ್ಷಿಸುವುದು ಮೋದಿ ಸರ್ಕಾರದ ಹಿಂದಿನ ಬಜೆಟ್‌ಗಳಂತೆ ಈ ಬಜೆಟ್‌ನಲ್ಲಿಯೂ ಗಮನಿಸಬಹುದಾದ ಪ್ರಮುಖ ವಿದ್ಯಮಾನವಾಗಿದೆ. ಮತ್ತೊಂದೆಡೆ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ವಿವಿಧ ಯೋಜನೆಗಳ ಮೂಲಕ ದೊಡ್ಡ ಪ್ರಮಾಣದ ಹಣವನ್ನು ಹಂಚಿಕೆ ಮಾಡಲಾಗಿದೆ. ಇದು ಎನ್‌ಡಿಎಯೇತರ ಮೈತ್ರಿ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳ ಜನರಿಗೆ ಸಂಪೂರ್ಣ ಅನ್ಯಾಯ ಎಸಗಲಾಗಿದೆ ಮತ್ತು ಒಕ್ಕೂಟದ ಮೂಲ ತತ್ವಗಳನ್ನು ಈ ಬಜೆಟ್ ಉಲ್ಲಂಘಿಸಿದೆ ಎಂದು ಡಿವೈಎಫ್ಐ ಖಂಡಿಸಿದೆ.ಉನ್ನತ ಶಿಕ್ಷಣ ಕ್ಷೇತ್ರವು NEP ಮತ್ತು ಕೇಸರಿಕರಣದಂತಹ ನೀತಿಗಳ ರೂಪದಲ್ಲಿ ಸಂಘಪರಿವಾರ ಸರ್ಕಾರದ ಕಡೆಯಿಂದ ನಿರಂತರ ದಾಳಿಗಳನ್ನು ಎದುರಿಸುತ್ತಿದೆ. ಬಜೆಟ್‌ನಲ್ಲಿಯೂ ಈ ನಿಟ್ಟಿನಲ್ಲಿ ಪ್ರಯತ್ನಗಳು ಎದ್ದು ಕಾಣುತ್ತಿವೆ. ವಿಶ್ವವಿದ್ಯಾನಿಲಯ ಅನುದಾನ ಆಯೋಗಕ್ಕೆ ಹೆಚ್ಚಿನ ಹಣಕಾಸು ನೆರವನ್ನು ಬಜೆಟ್‌ನಲ್ಲಿ ಮೀಸಲಿಡುವುದನ್ನು ಕಡಿತಗೊಳಿಸಲಾಗಿದ್ದು, ಇದು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಗಂಭೀರ ಬೆದರಿಕೆಯಾಗಿದೆ. ಇದೇ ಮಾದರಿಯಲ್ಲಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA) ನಂತಹ ವಿವಿಧ ಬಡತನ ನಿರ್ಮೂಲನೆ ಯೋಜನೆಗಳು ಕೇಂದ್ರ ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗದಿರುವುದು ದುರಂತ. ಮುಂಬರುವ ಹಣಕಾಸು ವರ್ಷಕ್ಕೆ ಈ ಯೋಜನೆಗೆ 86,000 ಕೋಟಿಗಳನ್ನು ನಿಗದಿಪಡಿಸಲಾಗಿದೆ. ಇದು ಫೆಬ್ರವರಿ 2023 ರಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ಎಷ್ಟು ಹಂಚಿಕೆಯಾಗಿದೆ ಎನ್ನುವುದಕ್ಕಿಂತ ಹೆಚ್ಚಿನದಾಗಿದೆ. ಆದರೆ ಅದನ್ನು 2021-22ರಲ್ಲಿ (98,468 ಕೋಟಿ) ಮತ್ತು ಅದಕ್ಕಿಂತ ಹಿಂದಿನ ವರ್ಷಗಳ ಯೋಜನೆಗೆ ಮಾಡಿದ ಹಂಚಿಕೆಯೊಂದಿಗೆ ಹಾಗೂ ಗ್ರಾಮೀಣ ಭಾರತದ ನಿರುದ್ಯೋಗ ದರಗಳೊಂದಿಗೆ ಹೋಲಿಸಿದಾಗ ಪ್ರಸ್ತುತ ಅನುದಾನ ಹಂಚಿಕೆಯು ತುಂಬಾ ಕಡಿಮೆಯಾಗಿದೆ. ಆಹಾರ ಭದ್ರತೆ ಖಾತ್ರಿಪಡಿಸುವಲ್ಲಿನ ಗಮನ ಕಡಿಮೆಯಾಗಿದ್ದು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸುವ ಸಬ್ಸಿಡಿ ಯೋಜನೆಗಳಿಗೆ ಹಂಚಿಕೆಯನ್ನು ಕಡಿತಗೊಳಿಸಲಾಗಿದೆ. ಯುವಜನರ ಹಾಗೂ ದೇಶದ ಜನತೆಯ ಹಿತ ಕಾಯುವಲ್ಲಿ ವಿಫಲವಾಗಿರುವ ಕೇಂದ್ರ ಸಕರಕಾರದ ಈ ಬಜೆಟ್ ಅನ್ನು ಡಿವೈಎಫ್ಐ ವಿರೋಧಿಸುತ್ತದೆ. ಯುವಜನರಿಗೆ ಉದ್ಯೋಗ, ಶಿಕ್ಷ ಖಾತ್ರಿಪಡಿಸುವ ಹಾಗೂ ದೇಶದ ಜನತೆಗೆ ಆಹಾರ, ಆರೋಗ್ಯ, ವಸತಿ ಖಾತ್ರಿಪಡಿಸುವ ಕಲ್ಯಾಣಕಾರಿ ಕ್ರಮಗಳನ್ನು ಕೈಗೊಳ್ಳುವ ಬಜೆಟ್ ಮಂಡಿಸಿ ಜಾರಿ ಮಾಡಬೇಕೆಂದು ಡಿವೈಎಫ್ಐ ಒತ್ತಾಯಿಸುತ್ತದೆ.

    ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್

    ನಳಿನ್‌ಕುಮಾರ್ ಕಟೀಲ್, 

    ಮಾಜಿ ರಾಜ್ಯಾಧ್ಯಕ್ಷ, ಸಂಸದರು, ದ.ಕ

    ”ರೈತರು, ಮಹಿಳೆಯರು, ಉದ್ದಿಮೆದಾರರ ಸಹಿತ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ ಮಂಡನೆಯಾಗಿದೆ. ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪಕ್ಕೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಭದ್ರ ತಳಪಾಯ ಹಾಕಿದೆ. ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂ., ಶಿಕ್ಷಣ,ಉದ್ಯೋಗ ಮತ್ತು ಕೌಶಲಾಭಿವೃದ್ಧಿಗೆ 1.48 ಲಕ್ಷ ಕೋಟಿ ರೂ., ಮಹಿಳೆಯರ ಅಭಿವೃದ್ಧಿಗೆ 3 ಲಕ್ಷ ಕೋಟಿ ರೂ., ಕೃಷಿ ವಲಯಕ್ಕೆ 1.52 ಲಕ್ಷ ರೂ. ಮೀಸಲಿರಿಸುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದಿಟ್ಟ ಕ್ರಮ ಕೈಗೊಳ್ಳಲಾಗಿದೆ. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುದ್ರಾ ಯೋಜನೆಯ ಸಾಲದ ಮೀತಿ ಏರಿಕೆ ಸ್ವಾಗತಾರ್ಹ.”

    ವೇದವ್ಯಾಸ್ ಕಾಮತ್

    ಶಾಸಕರು, ಮಂಗಳೂರು ದಕ್ಷಿಣ

    ”ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಸತತ ಏಳನೇ ಬಾರಿ ಮಂಡಿಸಿದ ಅತ್ಯುತ್ತಮ ಹಾಗೂ ಪ್ರಗತಿದಾಯಕ ಬಜೆಟ್ ರಾಷ್ಟ್ರದ ಭವಿಷ್ಯಕ್ಕೆ ಉತ್ತಮ ಅಡಿಪಾಯವಾಗಿದೆ.ಇದೊಂದು ದೂರದೃಷ್ಟಿಯುಳ್ಳ ಬಜೆಟ್ ಆಗಿದ್ದು ಮುಖ್ಯವಾಗಿ ಕೃಷಿ ಮತ್ತು ರೈತ, ಸಾಮಾಜಿಕ ನ್ಯಾಯ, ಶಿಕ್ಷಣ, ಉದ್ಯೋಗ, ಉತ್ಪಾದನೆ- ಸೇವಾ ಕ್ಷೇತ್ರ, ಕೌಶಲ್ಯಾಭಿವೃದ್ಧಿ, ಮಹಿಳೆ-ಯುವಕರು, ಶಕ್ತಿಮೂಲಗಳು, ಸಂಶೋಧನೆಯಂತಹ 9 ಪ್ರಮುಖ ಆದ್ಯತಾ ಕ್ಷೇತ್ರಗಳನ್ನು ಗುರುತಿಸುವ ಮೂಲಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸಂಕಲ್ಪದ ವಿಕಸಿತ ಭಾರತದ ನಿರ್ಮಾಣಕ್ಕೆ ಶಕ್ತಿ ತುಂಬಿದಂತಾಗಿದೆ.ಮಧ್ಯಮವರ್ಗ, ಕೈಗಾರಿಕೆ ವಲಯಕ್ಕೂ ವಿಶೇಷ ಆದ್ಯತೆ ನೀಡಲಾಗಿದ್ದು ರಾಷ್ಟ್ರದ ಅಭಿವೃದ್ಧಿಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ತೆರಿಗೆದಾರನಿಗೆ ಯಾವುದೇ ರೀತಿಯಲ್ಲೂ ಹೊರೆಯಾಗದಂತೆ ಎಚ್ಚರವಹಿಸಿರುವುದು ಪ್ರಶಂಸನೀಯ. ದೇಶದ ಮಹಿಳೆಯರಿಗೆ ಅತಿಹೆಚ್ಚು ಅನುಕೂಲ ಮಾಡಿಕೊಡುವ ನಾರಿಶಕ್ತಿ ಬಜೆಟ್ ಸಹ ಇದಾಗಿದ್ದು, ದೇಶದ ಸುಮಾರು 400 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ, ಕ್ಯಾನ್ಸರ್ ಔಷಧಗಳು ಅಗ್ಗ, ರಾಜ್ಯಗಳಿಗೆ 50 ವರ್ಷಗಳ ಬಡ್ಡಿರಹಿತ ಸಾಲ ನೀಡುವ ಘೋಷಣೆ ಹೀಗೆ ಹಲವು ಆಯಾಮಗಳಲ್ಲಿ ಈ ಬಜೆಟ್ ಸರ್ವಸ್ಪರ್ಶಿ ಬಜೆಟ್ ಎನಿಸಿರುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ”

    Share Information
    Advertisement
    Click to comment

    Leave a Reply

    Your email address will not be published. Required fields are marked *