Connect with us

    LATEST NEWS

    ಅವಮಾನಿಸಿದ್ದ ಕಂಪನಿಯನ್ನೇ ಖರೀದಿಸಿ ಮೆರೆದಿದ್ದ ಯಶಸ್ವಿ ಉದ್ಯಮಿ ರತನ್‌ ಟಾಟಾ!

    ಮಹಾನ್ ವಾಣಿಜ್ಯ ಸಾಮ್ರಾಜ್ಯವನ್ನು ಆಳಿದ ರತನ್ ಟಾಟಾ ಅವರು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಈ ಬೆನ್ನಲ್ಲೇ ಅವರ ಸಾಧನೆಗಳ ಬಗ್ಗೆ ಮೆಲುಕು ಹಾಕಲಾಗುತ್ತಿದೆ. 1980-90ರ ದಶಕದಲ್ಲಿ ಭಾರತದಲ್ಲಿ ಯಾವುದೇ ಸ್ವದೇಶಿ ಕಂಪನಿಗಳು ಕಾರುಗಳನ್ನು ಉತ್ಪಾದಿಸುತ್ತಿರಲಿಲ್ಲ. ಆಗೇನಿದ್ದರೂ ವಿದೇಶಿ ಕಂಪನಿಗಳ ಸಹಭಾಗಿತ್ವದಲ್ಲಿ ಭಾರತದಲ್ಲಿ ಕಾರು ಉತ್ಪಾದನೆಯಾಗುತ್ತಿತ್ತು. ಜೊತೆಗೆ ವಿದೇಶಿ ಕಂಪನಿಗಳ ಕಾರುಬಾರೇ ಜೋರಾಗಿತ್ತು. ಈ ಹಂತದಲ್ಲಿ ರತನ್ ಟಾಟಾ ಅವರು ಮೊದಲ ಬಾರಿಗೆ ಪ್ರಯಾಣಿಕ ವಾಹನಗಳ ವಿಭಾಗಕ್ಕೆ ಲಗ್ಗೆ ಇಡುವ ಪ್ರಯತ್ನ ಮಾಡಿದರು. 1998ರಲ್ಲಿ ಭಾರತದಲ್ಲಿ ಟಾಟಾ ಕಂಪನಿಯು ಪ್ಯಾಸೆಂಜ‌ರ್ ವಾಹನದ ಮಾರುಕಟ್ಟೆಗೆ ‘ಟಾಟಾ ಇಂಡಿಕಾ’ ಕಾರ್‌ನೊಂದಿಗೆ ಸ್ವದೇಶಿ ಮಾರುಕಟ್ಟೆಗೆ ಪ್ರವೇಶಿಸಿತ್ತು.

    ರತನ್ ಟಾಟಾ ಅವರು ವೈಯಕ್ತಿಕವಾಗಿ ಈ ಕಾರಿನ ಮೇಲೆ ಬಹಳಷ್ಟು ನಿರೀಕ್ಷೆ ಇರಿಸಿಕೊಂಡಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿತ್ತು. ಭಾರತೀಯರು ಈ ಕಾರುಗಳನ್ನು ತಿರಸ್ಕರಿಸಿದ್ದರು. ಇದು ರತನ್ ಟಾಟಾ ಅವರಿಗೆ ಎಲ್ಲಿಲ್ಲದ ನೋವು ತಂದಿತ್ತು. ಕಂಪನಿ ಭಾರಿ ನಷ್ಟ ಅನುಭವಿಸುವಂತೆ ಮಾಡಿತ್ತು. ಇದರಿಂದಾಗಿ ತಮ್ಮ ವಾಹನ ತಯಾರಿಕೆ ಉದ್ಯಮವನ್ನೇ ಮಾರಾಟ ಮಾಡಲು ರತನ್ ಟಾಟಾ ನಿರ್ಧರಿಸಿದ್ದರು.

    ಫೋರ್ಡ್‌ಗೆ ಮಾರಾಟ ಪ್ರಯತ್ನ:
    ಪ್ರಯಾಣಿಕ ವಾಹನ ಉದ್ಯಮ ಕೈಹಿಡಿಯಲ್ಲ ಎಂಬ ನಿರಾಸೆ ಹಿನ್ನೆಲೆಯಲ್ಲಿ, ಇಡೀ ಪ್ರಯಾಣಿಕ ವಾಹನ ಕಂಪನಿಯನ್ನೇ ಮಾರಾಟ ಮಾಡಲು ರತನ್ ನಿರ್ಧರಿಸಿದರು. ಅದರಂತೆ ರತನ್ ಟಾಟಾ ಮತ್ತು ಅವರ ತಂಡ ಅಮೆರಿಕದ ಫೋರ್ಡ್ ಕಂಪನಿಯ ಅಂದಿನ ಮುಖ್ಯಸ್ಥರಾದ ಬಿಲ್ ಫೋರ್ಡ್ ಅವರನ್ನು ಭೇಟಿಯಾಗಿ ಅವರಿಗೆ ತಮ್ಮ ಇಡೀ ಪ್ಯಾಸೆಂಜರ್ ತಯಾರಿಕೆ ಉದ್ಯಮವನ್ನು ಮಾರಾಟ ಮಾಡಲು ಪ್ರಸ್ತಾಪ ಮುಂದಿಟ್ಟರು. ಈ ಕುರಿತು ಅಮೆರಿಕದ ಡೆಟ್ರಾಯ್ಡ್ ಗೆ ತೆರಳಿದ ಟಾಟಾ, ಫೋರ್ಡ್ (ford) ಕಂಪನಿಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಬಿಲ್ ಫೋರ್ಡ್ ಮತ್ತು ಅವರ ತಂಡ ಅಹಂಕಾರದಿಂದಲೇ ಟಾಟಾ ಪ್ರಯಾಣಿಕ ವಾಹನ ವಿಭಾಗ ಖರೀದಿ ಮಾಡಲು ಮುಂದಾಯಿತು.

    ಜೊತೆಗೆ ರತನ್ ಟಾಟಾ ಅವರನ್ನು ಅತ್ಯಂತ ಕೀಳಾಗಿ ನೋಡಿತು. ‘ಕಾರುಗಳ ವ್ಯವಹಾರ ನಿಮಗೇಕೆ ಬೇಕಿತ್ತು?’ ಎಂದು ತುಂಬಾ ಹೀನಾಯವಾಗಿ ರತನ್ ಟಾಟಾ ಅವರನ್ನು ಅವಮಾನಿಸಿತ್ತು. ಹೀಗಾಗಿ ರತನ್ ಟಾಟಾ ಅವರು ಮಾರಾಟ ಮಾಡದೇ ಹಾಗೇ ಮರಳಿದ್ದರು. ಈ ಅವಮಾನವು ರತನ್ ಟಾಟಾರನ್ನು ಕಾರುಗಳ ಬಿಸಿನೆಸ್‌ನಲ್ಲಿ ಇನ್ನಷ್ಟು ಉತ್ತಮಗೊಳಿಸಿಕೊಳ್ಳುವಲ್ಲಿ ಪ್ರೇರೇಪಿಸಿತ್ತು.

    ಫೋರ್ಡ್ ಕಂಪನಿಯನ್ನು ಖರೀದಿ ಮಾಡಿದ ರತನ್‌ ಟಾಟಾ
    2008ರಲ್ಲಿ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿಕೆಯಾಗಿ ದೊಡ್ಡ ಕಂಪನಿಗಳೆಲ್ಲಾ ನೆಲೆಕಚ್ಚುತ್ತಿದ್ದವು. ಫೋರ್ಡ್ ಕಂಪನಿಯು ದಿವಾಳಿಯಾಗಿತ್ತು. ಅದರ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಸಂಪೂರ್ಣ ನಷ್ಟದಲ್ಲಿತ್ತು. 1989ರಲ್ಲಿ ಜಾಗ್ವಾರ್‌ನನ್ನು 2.5 ಶತಕೋಟಿ ಡಾಲರ್ ಕೊಟ್ಟು, 2000 ಇಸವಿಯಲ್ಲಿ 2.7 ಶತಕೋಟಿ ಡಾಲ‌ರ್ ಕೊಟ್ಟು ಲ್ಯಾಂಡ್ ರೋವರ್‌ನನ್ನು ಫೋರ್ಡ್ ಖರೀದಿಸಿತ್ತು. ಆದರೆ, ಇವುಗಳು ಬಿಳಿ ಆನೆ ಸಾಕಿದಂತೆ ಆಗಿತ್ತು. ಹೀಗಾಗಿ ಎರಡೂ ಕಂಪನಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಬಿಲ್ ಫೋರ್ಡ್, ಜಗತ್ತನ್ನು ಅಂಗಲಾಚುತ್ತಿದ್ದರು.

    ಇದೇ ಅವಕಾಶವನ್ನು ಪ್ರತೀಕಾರ ತೆಗೆದುಕೊಳ್ಳಲು ಬಳಸಿಕೊಂಡ ರತನ್ ಟಾಟಾ, ಎರಡೂ ಕಂಪನಿಗಳನ್ನು ಕೇವಲ 2.3 ಶತಕೋಟಿ ಡಾಲರ್‌ಗೆ ಖರೀದಿ ಮಾಡಿ ಭಾರಿ ಲಾಭ ಪಡೆದರು. ಟಾಟಾ ಅವರ ಈ ಖರೀದಿಗೆ ಬಿಲ್ ಫೋರ್ಡ್ ಧನ್ಯವಾದ ಸಲ್ಲಿಸಿದ್ದರು. ಬಳಿಕ ಟಾಟಾ ತೆಕ್ಕೆಯಲ್ಲಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಕಂಪನಿಗಳು ಜಗತ್ತಿನ ಐಷಾರಾಮಿ ಕಾರುಗಳ ಸಾಲಿನಲ್ಲಿ ರಾರಾಜಿಸುವಂತೆ ರತನ್ ಟಾಟಾ ಯಶಸ್ಸುಗಳಿಸಿ, ಪ್ರತಿಕಾರವನ್ನು ಯಶಸ್ಸಿನಲ್ಲಿ ತೆಗೆದುಕೊಳ್ಳಬೇಕು ಎಂದು ಸಂದೇಶ ಸಾರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *