KARNATAKA
ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ : ಬಿಜೆಪಿ ಮುಖಂಡನ ಬಂಧಿಸಿದ ಎನ್‌ಐಎ..!
ಶಿವಮೊಗ್ಗ : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಶಿವಮೊಗ್ಗದ ತೀರ್ಥಹಳ್ಳಿಯ ಬಿಜೆಪಿ ಮುಖಂಡ ಸಾಯಿಪ್ರಸಾದ್ ಎಂಬುವರನ್ನು ರಾಷ್ಟ್ರೀಯ ತನಿಖಾ ದಳ ಎನ್ಐಎ ವಶಕ್ಕೆ ಪಡೆದಿದ್ದು, ವಿಚಾರಣೆಗೊಳಪಡಿಸಿದೆ ಎನ್ನಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಸಾಯಿಪ್ರಸಾದ್ ಎನ್‌ಐಎ ರಾಡರ್‌ಗೆ ಸಿಕ್ಕಿದ್ದು, ಈ ವಿಧ್ವಂಸಕ ಕೃತ್ಯದ ಮಾಸ್ಟರ್ ಮೈಂಡ್‌ಗಳಾದ ಶಂಕಿತ ಐಸಿಸ್ ಉಗ್ರರಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್‌ಹುಸೇನ್ ಶಾಜಿಬ್ ಜತೆ ನಂಟು ಹೊಂದಿದ ಶಂಕೆ ಮೇರೆಗೆ ಸಾಯಿಪ್ರಸಾದ್‌ನನ್ನು ಎನ್‌ಐಎ ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಿದೆ ಎನ್ನಲಾಗಿದೆ.
ಇನ್ನು ಈ ವರದಿಗಳ ಬಗ್ಗೆ ಎನ್ಐಎ ಸ್ಪಷ್ಟನೆ ಕೂಡ ನೀಡಿದ್ದು, ಮಾರ್ಚ್ 1ರಂದು ಬೆಂಗಳೂರಿನ ವೈಟ್ಫೀಲ್ಡ್ ಬಳಿ ಇರುವ ITPLನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ, ಇಬ್ಬರು ಆರೋಪಿಗಳನ್ನ ಪತ್ತೆ ಹಚ್ಚಿದೆ. ಐಇಡಿ ಬಾಂಬ್ ಹೊತ್ತು ತಂದಿದ್ದ ಮುಸಾವೀರ್ ಹುಸೇನ್ ಹಾಗೂ ಸಹಾ ಸಂಚುಕೋರ ಅಬ್ದುಲ್ ಮತೀನ್ ತಾಹ ಇಬ್ಬರೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವರು ಎಂಬುದು ಗೊತ್ತಾಗಿದೆ.
ಪ್ರಕರಣದಲ್ಲಿ ಬಾಂಬ್ ಸ್ಫೋಟಕ್ಕೆ ಸಹಾಯ ಮಾಡಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸಾ ಮೂಲದ ಮುಜಾಮಿಲ್ ಷರೀಫ್ ಎಂಬಾತನನ್ನ ಬಂಧಿಸಲಾಗಿದೆ. ಅಲ್ಲದೆ ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ದೇಶದ 18 ಕಡೆ ದಾಳಿ ಮಾಡಿ, ಪರಿಶೀಲನೆ ಮಾಡಲಾಗಿದೆ. ಇಬ್ಬರು ಆರೋಪಿಗಳ ಸುಳಿವು ನೀಡುವವರಿಗೆ ತಲಾ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ತನಿಖೆಯ ಭಾಗವಾಗಿ ಆರೋಪಿಗಳ ಸಹಪಾಠಿಗಳು, ಸ್ನೇಹಿತರು, ಬಂಧಿತ ಆರೋಪಿಗಳ ವಿಚಾರಣೆ ಮಾಡಲಾಗುತ್ತಿದೆ. ಇದು ಭಯೋತ್ಪಾದಕ ಕೃತ್ಯ ಆಗಿರುವುದರಿಂದ ವಿಚಾರಣೆ ಮಾಡುವವರ ವಿವರಗಳನ್ನ ಬಹಿರಂಗಪಡಿಸುವುದು ತನಿಖೆಗೆ ಹಿನ್ನಡೆ ಆಗುತ್ತೆ. ಹೀಗಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಸಹಕರಿಸಲು NIA ಮನವಿ ಮಾಡಿದೆ.