KARNATAKA
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ, ಆರೋಪಿ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಿಸಿದ NIA…!
ಬೆಂಗಳೂರು : ನಾಡನ್ನು ಬೆಚ್ಚಿ ಬೀಳಿಸಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆಯನ್ನು ಎನ್‌ಐಎ ತೀವ್ರಗೊಳಿಸಿದೆ. ಈ ಮಧ್ಯೆ ಬಾಂಬರ್ ಫೋಟೋ ಬಿಡುಗಡೆ ಮಾಡಿರುವ ಎನ್‌ಐಎ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ.
ಪ್ರಕರಣದ ತನಿಖೆ ವಹಿಸಿಕೊಳ್ಳುವ ಮುನ್ನವೇ ಸಿಸಿಬಿ ನಡೆಸಿದ್ದ ತನಿಖೆ ವೇಳೆ ಬಾಂಬರ್ ಮಾಸ್ಕ್ ಹಾಕಿಕೊಳ್ಳದ ಫೋಟೋ ಪತ್ತೆಯಾಗಿತ್ತು. ಇದೀಗ ಆ ಫೋಟೋವನ್ನು ಎನ್ಐಎ ಬಿಡುಗಡೆ ಮಾಡಿದೆ. ಅಲ್ಲದೇ ಆರೋಪಿ ಬಗ್ಗೆ ತಿಳಿದರೆ ಕೂಡಲೇ 080-29510900, 8904241100 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಎನ್ಐಎ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ರಾಷ್ಟ್ರೀಯ ತನಿಖಾ ದಳ ಎನ್‌ಐಎ ಅಧಿಕಾರಿಗಳು ಮಂಗಳವಾರ ಬೆಂಗಳೂರು, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಸೈಯದ್ ಖೈಲ್, ಮೂಲತಃ ಕೇರಳ ಇಡುಕ್ಕಿ ನಿವಾಸಿ, ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬಿಜು ಅಬ್ರಹಾಂ ಹಾಗೂ ಅತ್ತಾವರ ಗ್ರಾಮದ ನಬೀದ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಇದಲ್ಲದೇ ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಾಸಿರ್ ಖಾನ್ ಎಂಬಾತನಿಗಾಗಿ ಹುಡುಕಾಟ ನಡೆಸಿ ಆರೋಪಿಗಳ ಬಗ್ಗೆ ಪೂರಕ ದಾಖಲೆಗಳನ್ನು ಸಂಗ್ರಹಿಸಿದ್ದ ಎರಡು ತಂಡಗಳಾಗಿ ಮಂಗಳೂರು ಮತ್ತು ಅಂಕೋಲಾಕ್ಕೆ ಭೇಟಿ ನೀಡಿದ್ದರು. ಎನ್‌ಐಎ ಅಧಿಕಾರಿಗಳು ನಿನ್ನೆ ಏಕಕಾಲಕ್ಕೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಂಜಾಬ್, ಗುಜರಾತ್ ಮತ್ತು ಪಶ್ಚಿಮ ಬಂಗಾಳದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದರು. ಈ ವೇಳೆ 25 ಮೊಬೈಲ್ ಫೋನ್‌ಗಳು, 6 ಲ್ಯಾಪ್‌ಟಾಪ್‌ಗಳು ಮತ್ತು 4 ಹಾರ್ಡ್ ಡಿಸ್ಕ್‌ಗಳು, ವಿವಿಧ ದಾಖಲೆಗಳು ಮತ್ತು ನಗದು ವಶಪಡಿಸಿಕೊಂಡಿದ್ದಾರೆ.