KARNATAKA
ರಾಮೇಶ್ವರಂ ಕಫೆಯಲ್ಲಿ ಬಾಂಬ್ ಇಟ್ಟವರು ತಮಿಳುನಾಡಿನಿಂದ ಬಂದವರು – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿವಾದಾತ್ಮಕ ಹೇಳಿಕೆ
ಬೆಂಗಳೂರು ಮಾರ್ಚ್ 20: ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ಬಾಂಬ್ ಇಟ್ಟವರು ತಮಿಳುನಾಡಿನಿಂದ ಬಂದವರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಶೋಭಾ ಕರಂದ್ಲಾಜೆ ವಿವಾದವಾಗುತ್ತಿದ್ದಂತೆ ಇದೀಗ ಕ್ಷಮೇ ಕೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ರಾಮೇಶ್ವರಂ ಸ್ಫೋಟದ ಹಿಂದಿನ ಬಾಂಬರ್ ತಮಿಳುನಾಡಿನ ಕೃಷ್ಣಗಿರಿ ಅರಣ್ಯದಲ್ಲಿ ‘‘ನಿಮ್ಮ ಸ್ಟಾಲಿನ್ ಮೂಗಿನ ಕೆಳಗೆ’’ತರಬೇತಿ ಪಡೆದಿದ್ದಾನೆ ಎಂದು ಆರೋಪಿಸಿದ್ದರು. ಮಾತ್ರವಲ್ಲದೆ, ‘‘ತಮಿಳುನಾಡಿನ ಜನರು ಇಲ್ಲಿಗೆ ಬರುತ್ತಾರೆ, ಅಲ್ಲಿ ತರಬೇತಿ ಪಡೆಯುತ್ತಾರೆ ಮತ್ತು ಇಲ್ಲಿ ಬಾಂಬ್ ಹಾಕುತ್ತಾರೆ. ಅವರು ಕೆಫೆಯಲ್ಲಿ ಬಾಂಬ್ ಇರಿಸಿದ್ದಾರೆ’’ ಎಂದು ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ತಮಿಳುನಾಡು ಸಿಎಂ ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು.
‘ಇಂತಹ ಸಮರ್ಥನೆಗೆ ಆಕೆಗೆ ಅಧಿಕಾರವಿಲ್ಲ. ತಮಿಳಿಗರು ಮತ್ತು ಕನ್ನಡಿಗರು ಬಿಜೆಪಿ ಈ ವಿಭಜನೆಯ ವಾಕ್ಚಾತುರ್ಯವನ್ನು ತಿರಸ್ಕಾರ ಮಾಡುತ್ತಾರೆ. ಶೋಭಾ ಅವರ ಹೇಳಿಕೆ ಶಾಂತಿ, ಸೌಹಾರ್ದತೆ, ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟು ಮಾಡಿದೆ. ಆಕೆ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ನಾನು ಒತ್ತಾಯಿಸುತ್ತೇನೆ’
ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ ಬಳಿಕ ಕ್ಷಮೆಯಾಚಿಸಿದ್ದಾರೆ. ‘ಎಲ್ಲಾ ನನ್ನ ತಮಿಳು ಸಹೋದರ ಸಹೋದರಿಯರೇ, ನನ್ನ ಮಾತುಗಳು ಕತ್ತಲನ್ನು ಮೂಡಿಸಲು ಅಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಮಾತುಗಳು ಕೆಲವರಿಗೆ ನೋವು ತಂದಿದೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಟೀಕೆಗಳು ಕೇವಲ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರನ್ನು ಉದ್ದೇಶಿಸಿವೆ’ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ನಂತರ ‘ನನ್ನ ಹೇಳಿಕೆ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದೆ. ತಮಿಳುನಾಡಿದ ಯಾರಾದರೂ ಸರಿ ಅವರಿಗೆ ಹೃದಯದಾಳದಿಂದ ಕ್ಷಮೆ ಕೇಳುತ್ತೇನೆ. ನಾನು ಈ ಹಿಂದೆ ಮಾಡಿದ ಕಾಮೆಂಟ್ ಹಿಂಪಡೆಯುತ್ತೇನೆ’ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.