DAKSHINA KANNADA
ಬಿಜೆಪಿ ಕಾರ್ಯಕರ್ತರು ಸೇರಿದ್ದ ರಸ್ತೆಯಲ್ಲಿ ಕಾರು ನುಗ್ಗಿಸಿ ದರ್ಪ ಮೆರೆದ ಸಚಿವ…
ಬಿಜೆಪಿ ಕಾರ್ಯಕರ್ತರು ಸೇರಿದ್ದ ರಸ್ತೆಯಲ್ಲಿ ಕಾರು ನುಗ್ಗಿಸಿ ದರ್ಪ ಮೆರೆದ ಸಚಿವ…
ಪುತ್ತೂರು ಮಾರ್ಚ್ 4: ಬಿಜೆಪಿ ಪಕ್ಷದ ಸುರಕ್ಷಾ ಪಾದಯಾತ್ರೆಯ ಮಧ್ಯದಲ್ಲೇ ಉದ್ಧೇಶಪೂರ್ವಕ ಕಾರು ನುಗ್ಗಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ದರ್ಪ ಪ್ರದರ್ಶಿಸಿದ ಘಟನೆ ಪುತ್ತೂರಿನಲ್ಲಿ ಇಂದು ನಡೆದಿದೆ. ಕರಾವಳಿ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಪಕ್ಷ ಜನ ಸುರಕ್ಷಾ ಯಾತ್ರೆಯನ್ನು ಹಮ್ಮಿಕೊಂಡಿದ್ದು,
ಇಂದು ಪುತ್ತೂರಿನಲ್ಲಿ ಈ ಯಾತ್ರೆ ಸಂಚರಿಸುವ ಕಾರ್ಯಕ್ರಮವಿತ್ತು. ಆ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ದರ್ಬೆ ವೃತ್ತದ ಬಳಿ ಪಾದಯಾತ್ರೆಯಲ್ಲಿ ಸೇರಲು ಕಾದು ಕುಳಿತಿದ್ದರು.ನೂರಾರು ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಪರ ಘೋಷಣೆಗಳನ್ನೀ ಕೂಗುತ್ತಿದ್ದರು. ಈ ಸಂದರ್ಭದಲ್ಲಿ ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಸಚಿವ ರಮಾನಾಥ ರೈ ಕಾರು ದರ್ಬೆ ವೃತ್ತದ ಬಳಿ ಬಂದಿದೆ.
ಬೈಪಾಸ್ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದನ್ನು ಗಮನಿಸಿದ ಕಾರು ಚಾಲಕ ಕಾರನ್ನು ಪುತ್ತೂರು ಪೇಟೆಗೆ ಹೋಗುವ ರಸ್ತೆಯ ಮೂಲಕ ಕೊಂಡೊಯ್ಯಲು ಮುಂದಾಗಿದ್ದ. ಪೇಟೆಯ ಕಡೆಗೆ ಕಾರು ಮುಂದೆ ಸಾಗಿತ್ತು. ಹಠಾತ್ತಾಗಿ ಸಚಿವರ ಕಾರು ಬ್ರೇಕ್ ಹಾಕಿ ಹಿಮ್ಮುಖವಾಗಿ ಸಾಗಿ ಬಿಜೆಪಿ ಕಾರ್ಯಕರ್ತರು ಸೇರಿದ್ದ ಬೈಪಾಸ್ ರಸ್ತೆಯಲ್ಲೇ ಮುನ್ನುಗ್ಗಿದೆ. ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಇದನ್ನು ಗಮನಿಸಿ ಇನ್ನೂ ಜೋರಾಗಿ ಘೋಷಣೆ ಕೂಗಿದ್ದಾರೆ. ಪಟ್ಟು ಬಿಡದ ಸಚಿವರ ಕಾಲು ಚಾಲಕ ಕಾರ್ಯಕರ್ತರ ಮದ್ಯೆಯೇ ಕಾರು ನುಗ್ಗಿಸಿದ್ದಾನೆ.
ಕಾರಿನಲ್ಲಿದ್ದ ಸಚಿವರ ಅಣತಿಯಂತೆ ಬಿಜೆಪಿ ಕಾರ್ಯಕರ್ತರ ಮಧ್ಯೆಯೇ ಕಾರು ಚಲಾಯಿಸುವಂತೆ ಚಾಲಕನಿಗೆ ಸೂಚನೆ ನೀಡಿದ ಸಚಿವರು ತಮ್ಮ ದರ್ಪವನ್ನು ಪ್ರದರ್ಶಿಸಿದ್ದಾರೆ. ಜಿಲ್ಲೆಯಲ್ಲಿ ಮೊದಲೇ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳ ನಡುವೆ ಹಾವು-ಮುಂಗುಸಿ ಆಟ ನಡೆಯುತ್ತಿದ್ದ, ಸಚಿವರ ಈ ನಡೆ ಜಿಲ್ಲೆಯಲ್ಲಿ ಮತ್ತೆ ಉದ್ವಿಗ್ನತೆಯನ್ನು ಕದಡುವ ಪ್ರಯತ್ನದಂತೆ ಕಂಡು ಬಂದಿದೆ. ತನ್ನ ಕಾರು ಸಲೀಸಾಗಿ ತೆರಳಲು ರಾಜಮಾರ್ಗದಂತ ರಸ್ತೆಯಿದ್ದರೂ,ವಿರೋಧ ಪಕ್ಷಗಳ ಕಾರ್ಯಕರ್ತರು ಸೇರಿದ್ದ ರಸ್ತೆಯಲ್ಲೇ ಕಾರು ನುಗ್ಗಿಸುವ ಅನಿವಾರ್ಯತೆ ಸಚಿವರಿಗೇನಿತ್ತು ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.