LATEST NEWS
ಮತ್ತೆ ಮಳೆಗೆ ಮುಳುಗಿದ ತಮಿಳುನಾಡು – ನಾಲ್ಕು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ರಜೆ ಘೋಷಣೆ
ಚೆನ್ನೈ ಡಿಸೆಂಬರ್ 18 : ಮಿಚಾಂಗ್ ಚಂಡಮಾರುತದ ಅಬ್ಬರಕ್ಕೆ ನಲುಗಿದ್ದ ತಮಿಳುನಾಡಿನಲ್ಲಿ ಮತ್ತೆ ಇದೀಗ ಮಳೆ ಅಬ್ಬರ ಪ್ರಾರಂಭವಾಗಿದೆ. ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಸೋಮವಾರ ಅತಿ ಹೆಚ್ಚು ಮಳೆ ಮುಂದುವರಿದಿದ್ದು, ಪಾಳಯಂಕೊಟ್ಟೈನಲ್ಲಿ 26 ಸೆಂ.ಮೀ, ಮತ್ತು ಕನ್ಯಾಕುಮಾರಿಯಲ್ಲಿ 17 ಸೆಂ.ಮೀ ಮಳೆ ದಾಖಲಾಗಿದೆ.
ತಿರುನಲ್ವೇಲಿ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಜನರು ಆಶ್ರಯ ಶಿಬಿರಕ್ಕೆ ತೆರಳಿದ್ದಾರೆ. ಆಶ್ರಯ ಮನೆಯಿಂದ ಪಡಿತರಕ್ಕಾಗಿ ಜನರು ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ. ತೂತ್ಕುಡಿ ಜಿಲ್ಲೆಯ, ತಾಲೂಕಿನ ಶ್ರೀವೈಕುಂಟಂನಲ್ಲಿ ನಿನ್ನೆ ಭಾನುವಾರ 525 ಮಿಮೀ ಮಳೆಯಾಗಿದ್ದು, ಈ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಇದಲ್ಲದೆ, ತಿರುಚೆಂದರ್, ಸಾತಾಂಕುಳಂ, ಕಯತಾರ್, ಒಟ್ಟಾಪಿದ್ರಂ ಕೂಡ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.
ಭಾನುವಾರ ಸಂಜೆ 5:30 ರವರೆಗೆ ತಿರುನಲ್ವೇಲಿಯ ಪಳಯಂಕೊಟ್ಟೈನಲ್ಲಿ 260 ಮಿಮೀ ಮಳೆಯಾಗಿದೆ.ವಿರುದುನಗರ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ವಿರುದುನಗರದ ಜಿಲ್ಲಾಧಿಕಾರಿಗಳು ಡಿಸೆಂಬರ್ 18 ರಂದು ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ 250 ರಾಜ್ಯ ವಿಪತ್ತು ನಿರ್ವಹಣಾ ಪಡೆಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನು ನೆರೆ ಪೀಡಿತ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ತಿರುನಲ್ವೇಲಿ ಜಿಲ್ಲೆಯಲ್ಲಿ 19, ಕನ್ಯಾಕುಮಾರಿಯಲ್ಲಿ 4 , ತೂತುಕುಡಿಯಲ್ಲಿ 2 ಮತ್ತು ತೆಂಕಾಸಿಯಲ್ಲಿ 1 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸ್ಟಾಲಿನ್ ಸೂಚಿಸಿದ್ದಾರೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.