LATEST NEWS
ದಕ್ಷಿಣಕನ್ನಡದಲ್ಲಿ ಮುಂದುವರೆದ ಮಳೆ ಅಬ್ಬರ

ಮಂಗಳೂರು ಮೇ 21: ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಇಂದೂ ಕೂಡ ಮಳೆ ಅಬ್ಬರ ಮುಂದುವರೆದಿದೆ. ಮಂಗಳವಾರ ದಿನವಿಡೀ ಸುರಿದ ಮಳೆ ಬುಧವಾರವೂ ಮುಂದುವರೆದಿದೆ. ಹಲವೆಡೆ ಮರಗಳು ಬಿದ್ದು, ಮಣ್ಣು ಕುಸಿದು ಹಾನಿ ಉಂಟಾಗಿದೆ.
ನಗರದಲ್ಲಿ ಮಂಗಳವಾರ ರಾತ್ರಿ ಬಿಟ್ಟು ಬಿಟ್ಟು ಮಳೆಯಾಗಿದೆ. ಬುಧವಾರ ನಸುಕಿನಲ್ಲಿ ಮಳೆ ನಿಂತಿತ್ತು. ಬೆಳಿಗ್ಗೆ 8ರ ಬಳಿಕ ತುಂತುರು ಮಳೆ ಮತ್ತೆ ಶುರುವಾಗಿದೆ. ಉಳ್ಳಾಲ ತಾಲ್ಲೂಕಿನ ಸಜಿಪ ಪಡು ಗ್ರಾಮದ ತಲೆಮೊಗರು ಎಂಬಲ್ಲಿ ಇಸಮ್ಮ ಅವರ ಮನೆಗೆ ಪಕ್ಕದ ಮಸೀದಿಯ ಆವರಣ ಗೋಡೆ ಬಿದ್ದು ಭಾಗಶಃ ಹಾನಿಯಾಗಿದೆ.

ಕೊಣಾಜೆ ಗ್ರಾಮದ ಆದಿಶಕ್ತಿ ದೇವಸ್ಥಾನ ದಡಸ್ ಎಂಬಲ್ಲಿ ತಡೆಗೋಡೆ ಕುಸಿದಿದೆ. ಕಿನ್ಯ ಗ್ರಾಮದ ಮಹಮ್ಮದ್ ಹನೀಫ್ ಅವರ ಮನೆ ಭಾಗಶಃ ಹಾನಿಗೊಳಗಾಗಿದೆ. ಮುಂಗಾರು ಪೂರ್ವ ಮಳೆ ಇನ್ನು ಎರಡು ಮೂರು ದಿನ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕೇರಳಕ್ಕೆ ಇನ್ನು ನಾಲ್ಕೈದು ದಿನಗಳಲ್ಲಿ ಮುಂಗಾರು ಮಳೆ ಎಂಟ್ರಿ ಕೊಡಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.