DAKSHINA KANNADA
ಮಂಗಳೂರು ರೈಲ್ವೇ ಅಧಿಕಾರಿಗಳಿಗೆ ಕನ್ನಡ ಕಲಿಯುವಂತೆ ಸಚಿವ ಸೋಮಣ್ಣ ತಾಕೀತು..!
ಮಂಗಳೂರು: ಶತಮಾನದ ಇತಿಹಾಸ ಇರುವ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಅಗತ್ಯ ಇರುವ ಯೋಜನೆ ಸಿದ್ದಗೊಂಡಿದ್ದು ಮುಂದಿನ ತಿಂಗಳಲ್ಲಿ ಟೆಂಡರ್ ಕರೆಯಲು ಸೂಚಿಸಲಾಗುವುದು ಎಂದು ಕೇಂದ್ರದ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬುಧವಾರ ನಗರದ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳನ್ನು ಮತ್ತು ಅಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳನ್ನು ಅಧಿಕಾರಿಗಳ ಜೊತೆ ಪರಿಶೀಸಿದರು.
ಬಳಿಕ ಮಾತನಾಡಿದ ಅವರು ಮಂಗಳೂರಿನಲ್ಲಿ ರೈಲ್ವೇ ಅಭಿವೃದ್ದಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಪಾಲ್ಘಾಟ್- ಕೊಂಕಣ್- ಮೈಸೂರು ಈ ಮೂರು ರೈಲ್ವೇ ಇಲಾಖೆಗಳ ಮಧ್ಯೆ ಮಂಗಳೂರು ವಿಭಾಗ ಸಿಕ್ಕಿಹಾಕಿಕೊಂಡಿದೆ. ಆದ್ದರಿಂದ ಮೂರು ಇಲಾಖೆಯ ಜನರಲ್ ಮ್ಯಾನೇಜರ್, ಸಿಇಒ, ಐದಾರು ಟಿಆರ್‌ಎಫ್ಒರೊಂದಿಗೆ ಮಾತನಾಡುತ್ತೇನೆ. ನಗರ ಸುರಕ್ಷತೆಗಾಗಿ ಎನ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾದರಿಯಲ್ಲಿ ರೈಲ್ವೇ ಇಲಾಖೆಯಲ್ಲಿಯೇ ಪ್ರತ್ಯೇಕ ಪ್ರಾಕೃತಿಕ ವಿಕೋಪ ತಂಡವನ್ನು ಇರಿಸಲಾಗಿದೆ. ವಾರ್‌ರೂಂಗಳನ್ನು ಮಾಡಿದ್ದೇವೆ. ಈ ಬಾರಿ ಮಳೆ ಹೆಚ್ಚಾಗಿದ್ದು, ಅವಘಡಗಳು ಆಗಿರುವಲ್ಲಿ ಸಮರೋಪಾದಿಯಲ್ಲಿ ಕೆಲಸ ಆಗುತ್ತಿದೆ. ಶಾಶ್ವತವಾದ ಪರಿಹಾರ ಮಾಡುವ ಕೆಲಸ ಮಾಡಲಾಗುತ್ತದೆ ಎಂದರು.
ಕನ್ನಡ ಕಲಿಯುವಂತೆ ರೈಲ್ವೆ ಅಧಿಕಾರಿಗಳಿಗೆ ಸಚಿವರ ತಾಕೀತು.!
ಬಳಿಕ ರೈಲ್ವೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು ನಾನು ಚಿಕ್ಕವನಿದ್ದಾಗ ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಜೈಲು ಪಾಲಾಗಿದ್ದೆ. ಆದರೆ ಈಗ ನನಗೆ ಹಿಂದಿಯ ಮಹತ್ವದ ಅರಿವಾಗಿದೆ. ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ಎದ್ದು ಹಿಂದಿಯಲ್ಲಿ ಅಕ್ಷರ ಬರೆಯಲು ಕಲಿಯುತ್ತಿರುವುದಾಗಿ ತಿಳಿಸಿದರು. ಇನ್ನು ಆರು ತಿಂಗಳಲ್ಲಿ ಹಿಂದಿ ಕಲಿತು ಪತ್ರ ಬರೆಯಲು ಹಾಗೂ ಸಂಸತ್ತಿನಲ್ಲಿ ಭಾಷಣ ಮಾಡುವುದನ್ನು ಕಲಿಯುತ್ತೇನೆ ಎಂದ ಸೋಮಣ್ಣ, ರೈಲ್ವೆ ಅಧಿಕಾರಿಗಳು ಕನ್ನಡ ಕಲಿಯುವುದು ಕಷ್ಟವಲ್ಲ, ಅವರು ಭಾಷೆ ಕಲಿಯಲು ಸಾಮಗ್ರಿಗಳನ್ನು ಒದಗಿಸುವಂತೆ ಸ್ಥಳದಲ್ಲಿದ್ದ ಶಾಸಕರಿಗೆ ಸೂಚಿಸಿದರು.