DAKSHINA KANNADA
ಗ್ರಾಮೀಣ ಭಾಗದ ವಿಧ್ಯಾರ್ಥಿಯ ಅವಿಷ್ಕಾರ ಸ್ಯಾನಿಟೈಸರ್ ಯಂತ್ರ
ಗ್ರಾಮೀಣ ಭಾಗದ ವಿಧ್ಯಾರ್ಥಿಯ ಅವಿಷ್ಕಾರ ಸ್ಯಾನಿಟೈಸರ್ ಯಂತ್ರ
ಪುತ್ತೂರು ಮೇ.22: ಸದ್ಯ ಕೊರೊನಾ ಸೊಂಕು ನಿಲ್ಲುವ ಪರಿಸ್ಥಿತಿ ಇಲ್ಲ ಅನ್ನೊದು ಈಗಾಗಲೇ ಮನದಟ್ಟು ಆಗಿದ್ದು ದೇಶದಲ್ಲೂ ದಿನದಿಂದ ದಿನಕ್ಕೆ ಕೊರೊನಾ ಭಾಧಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಇನ್ನೆನಿದ್ದರೂ ಕೊರೊನಾ ಜೊತೆಯೇ ಮುಂದಿನ ಬದುಕು ಎನ್ನುವ ಸೂಚನೆಯನ್ನೂ ನೀಡಲಾಗಿದೆ. ಇದಕ್ಕಾಗಿಯೇ ಮಾಸ್ಕ್ , ಸಾಮಾಜಿಕ ಅಂತರ, ಸ್ಯಾನಿಟೈಸರ್ ಈಗ ಅನಿವಾರ್ಯವೂ ಆಗಿದೆ. ಸ್ಯಾನಿಟೈಸರ್ ಬಳಸುವ ವಿಧಾನದಲ್ಲೂ ಬದಲಾವಣೆಯ ಅಗತ್ಯವಿದ್ದು, ದಕ್ಷಿಣಕನ್ನಡದ ಪೋರನೊಬ್ಬ ಸ್ಯಾನಿಟೈಸರ್ ಬಳಕೆಗೆ ಹೊಸ ಸಂಶೋಧನೆಯನ್ನು ನಡೆಸಿದ್ದಾನೆ.
ಪುತ್ತೂರಿನ ನಿವಾಸಿ ಎಂಟನೇ ತರಗತಿಯ ವಿದ್ಯಾರ್ಥಿ ನಿಹಾಲ್ ಈ ಸಾಧನೆ ಮಾಡಿದ ಪೋರ. ಸ್ಯಾನಿಟೈಸರ್ ಗಳನ್ನು ಬಹುತೇಕ ಎಲ್ಲಾ ಕಛೇರಿಗಳನ್ನು ಬಳಸುತ್ತಿದ್ದರೂ, ಸ್ಯಾನಿಟೈಸರ್ ನೀಡಲೆಂದೇ ಕೆಲವು ಕಡೆಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಬೇಕು. ಇಲ್ಲವೇ ಸ್ಯಾನಿಟೈಸರ್ ಅನ್ನು ಕಛೇರಿಯ ಬಾಗಿಲ ಬಳಿಯಿಟ್ಟು ಬರುವ ಜನರೇ ಸ್ಯಾನಿಟೈಸರ್ ಹಾಕಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇದರಿಂದ ರೋಗಾಣು ಇತರರಿಗೂ ಹರಡುವ ಸಾಧ್ಯತೆಯನ್ನು ಮನಗಂಡ ಈ ವಿದ್ಯಾರ್ಥಿ ಕಾಲಲ್ಲಿ ಒತ್ತಿ ಸ್ಯಾನಿಟೈಸರ್ ಬಳಸಬಹುದಾದ ಈ ಯಂತ್ರವನ್ನು ತಯಾರಿಸಿದ್ದಾನೆ. ಅತ್ಯಂತ ಸಾಮಾನ್ಯ ತಂತ್ರಜ್ಞಾನವನ್ನು ಬಳಸಿ ಈ ಯಂತ್ರವನ್ನು ಸಂಶೋಧಿಸಿರುವ ನಿಹಾಲ್ ಹೀಗೆ ತಯಾರಿಸಿದ ಯಂತ್ರಗಳನ್ನು ಪುತ್ತೂರಿನ ಎಲ್ಲಾ ಸರಕಾರಿ ಕಛೇರಿಗಳಿಗೆ ಉದಾರವಾಗಿ ನೀಡುತ್ತಿದ್ದಾನೆ. ಪುತ್ತೂರಿನ ಬಹುತೇಕ ಎಲ್ಲಾ ಸರಕಾರಿ ಕಛೇರಿಗಳಲ್ಲಿ ,ಖಾಸಗಿ ಕಛೇರಿಗಳಲ್ಲಿ ಈ ಸ್ಯಾನಿಟೈಸರ್ ಯಂತ್ರ ಸಾಮಾನ್ಯವಾಗಿದ್ದು, ಯುಪಿವಿಸಿ ಪೈಪ್ ಬಳಸಿ ಈ ಯಂತ್ರವನ್ನು ತಯಾರಿಸಿದ್ದಾನೆ. ಒಂದು ಯಂತ್ರಕ್ಕೆ ಸುಮಾರು 1000 ದಿಂದ 1500 ರೂಪಾಯಿ ಖರ್ಚು ತಗಲುತ್ತಿದ್ದು, ಆಸಕ್ತರಿಗೆ ಇದನ್ನು ಪೂರೈಸುವ ಇಚ್ಛೆಯನ್ನೂ ಹೊಂದಿದ್ದಾನೆ.
ಪುತ್ತೂರಿನ ಪೋಲೀಸ್ ಠಾಣೆ, ಮಿನಿ ವಿಧಾನಸೌಧ, ಆರ್.ಟಿ.ಒ ಕಛೇರಿ, ನಗರಸಭೆ ಹೀಗೆ ಸಾರ್ವಜನಿಕರು ಬರುವ ಎಲ್ಲಾ ಕಛೇರಿಗಳಿಗೂ ಈ ಸ್ಯಾನಿಟೈಸರ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಗಿದೆ. ಪೋರನ ಈ ಆವಿಷ್ಕಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೆಲವರು ಗೌರವಧನವನ್ನೂ ನೀಡಲು ಆರಂಭಿಸಿದ್ದಾರೆ. ಕೈಗಳ ಶುಚಿತ್ವ ಅಗತ್ಯವಾಗಿದ್ದು, ಅದರಲ್ಲೂ ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಬರುವ ಸರಕಾರಿ ಕಛೇರಿಗಳಲ್ಲಿ ಇಂಥಹ ಯಂತ್ರದ ಅನಿವಾರ್ಯತೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.
ಪುತ್ತೂರಿನ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ನಿಹಾಲ್ ಹಲವು ಆವಿಷ್ಕಾರಗಳ ಮೂಲಕ ಗಮನಸೆಳೆದ ವಿದ್ಯಾರ್ಥಿಯೂ ಆಗಿದ್ದಾನೆ. ಇದೀಗ ಕೊರೊನಾ ತಡೆಗೆ ತನ್ನದೇ ಯಂತ್ರವನ್ನು ಆವಿಷ್ಕರಿಸುವ ಮೂಲಕ ಕೊರೊನಾ ತಡೆಯಲ್ಲಿ ತನ್ನ ಪಾತ್ರವನ್ನೂ ಪರಿಪೂರ್ಣವಾಗಿ ನಿಭಾಯಿಸಿದ್ದಾನೆ.