DAKSHINA KANNADA
ಪುತ್ತೂರಿನ ಮಹಾಲಿಂಗೇಶ್ವರ ಕ್ಷೇತ್ರಕ್ಕೂ ಹುಲಿ ಕುಣಿತಕ್ಕೂ ಇದೆ ಪಾವಿತ್ರ್ಯದ ನಂಟು..!
ಪುತ್ತೂರು : ದುರ್ಗೆಯ ಆರಾಧನೆಯಾದ ನವರಾತ್ರಿ ಉತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ನವರಾತ್ರಿ ಎಂದರೆ ಒಂದೆಡೆ ನವದುರ್ಗೆಯರ ಪ್ರತಿಷ್ಠಾಪಿಸಿ ಆರಾಧನೆ, ಇನ್ನೊಂದೆಡೆ ವಿವಿಧ ವೇಷಗಳ ಆಕರ್ಷಣೆ. ಇಂಥ ವೇಷಗಳು ತಮ್ಮ ಪ್ರದರ್ಶನ ನೀಡುವ ಮೊದಲು ದೇವಸ್ಥಾನಗಳಲ್ಲಿ ತಮ್ಮ ಪ್ರದರ್ಶನಗಳನ್ನು ನೀಡುತ್ತವೆ. ಇಂಥಹುದೇ ಒಂದು ಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ ಕ್ಷೇತ್ರ.
ನವದುರ್ಗೆಯರನ್ನು ಆರಾಧಿಸುವ ನವರಾತ್ರಿಯಲ್ಲಿ ದೇವಿಯ ಆರಾಧನೆಗೇ ಪ್ರಮುಖ ಆದ್ಯತೆ. ದೇವಿಯ ವಾಹನಗಳಲ್ಲಿ ಒಂದಾದ ಹುಲಿಯ ವೇಷವನ್ನು ಹಾಕೋದು ಕರಾವಳಿಯಲ್ಲಿ ಸಾಮಾನ್ಯ. ಧಾರ್ಮಿಕ ವಿಧಿ-ವಿಧಾನಗಳ ಜೊತೆಗೆ ಈ ವೇಷಗಳು ಪ್ರಾರಂಭವಾಗುತ್ತಿದ್ದು,ತಮ್ಮ ಮೊದಲ ಪ್ರದರ್ಶನವನ್ನು ದೇವಸ್ಥಾನಗಳ ಮುಂದೆ ನೀಡುತ್ತವೆ.
ಜಿಲ್ಲೆಯ ಅತ್ಯಂತ ಪುರಾತನ ಕ್ಷೇತ್ರಗಳಲ್ಲಿ ಒಂದಾದ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಇಂತಹ ಅನೇಕ ವೇಷಧಾರಿಗಳು ಮೊದಲು ದೇವರ ಮುಂದೆ ತಮ್ಮ ಪ್ರದರ್ಶನವನ್ನು ನೀಡುತ್ತವೆ. ಅದರ ಬಳಿಕವಷ್ಟೇ ಈ ವೇಷಧಾರಿಗಳು ಮನೆ ಮನೆಗೆ ತೆರಳಿ ತಮ್ಮ ಪ್ರದರ್ಶನವನ್ನು ನೀಡುತ್ತವೆ ಎನ್ನುತ್ತಾರೆ ಶಾರದಾ ಮಂದಿರ ಸಮಿತಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ್ ಅವರು.
ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲೇ ಇರುವ ಶಾರದಾ ಮಂದಿರದಲ್ಲೂ ಇಂತಹುದೇ ಸಂಪ್ರದಾಯವನ್ನು ವೇಷಧಾರಿಗಳು ಹಲವು ವರ್ಷಗಳ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ತಮ್ಮ ತಮ್ಮ ವೇಷಗಳಿಗೆ ಸಂಬಂಧಪಟ್ಟ ಮುಖವಾಡ,ಆಯುಧಗಳನ್ನು ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಿದ ಬಳಕವೇ ಪ್ರದರ್ಶನಕ್ಕೆ ತೆರಳುತ್ತಾರೆ. ಇಂದಿಗೂ ಈ ಸಂಪ್ರದಾಯವನ್ನು ವೇಷಧಾರಿಗಳು ಪಾಲಿಸಿಕೊಂಡು ಬರುತ್ತಿದ್ದು, ಸಂಪ್ರದಾಯಕ್ಕೆ ಚ್ಯುತಿ ಬರದಂತೆ ನಡೆಯುತ್ತಿದ್ದಾರೆ.
ಹುಲಿ ವೇಷ ಧಾರಣೆ ಹೇಗಿರುತ್ತೆ.?
ಹುಲಿವೇಷ ಹಾಕುವವರು ವೃತದಲ್ಲಿರಬೇಕಾಗುತ್ತೆ. ವಿಶೇಷ ಪೂಜೆ ಸಲ್ಲಿಕೆಯಾದ ಬಳಿಕ ಕೆಂಪು ಮಿಶ್ರಿತ ಹಳದಿ ಬಣ್ಣವನ್ನು ಇಡೀ ದೇಹಕ್ಕೆ ಹಚ್ಚಲಾಗುತ್ತೆ. ಬಣ್ಣ ಹಾಕುವಾಗ ವೇಷಧಾರಿ ಮೂರು ಗಂಟೆ ಕಾಲ ಎರಡು ಕೈಯನ್ನು ಅಗಲಿಸಿ ಉದ್ದದ ಕೋಲಿನ ಮೇಲೆ ಇಟ್ಟು ನಿಂತೇ ಇರಬೇಕು. ಯಾಕೆಂದರೆ, ಹಾಕಿದ ಬಣ್ಣ ಹಾಗೇ ಒಣಗಬೇಕು. ವೇಷಗಾರ ಚಡ್ಡಿಯನ್ನು ಮಾತ್ರ ಧರಿಸಿರುತ್ತಾನೆ. ತಲೆಗೆ ಬಿಗಿಯಾಗಿ ಕುಳಿತುಕೊಳ್ಳುವ ಹುಲಿಯ ಮುಖವಾಡ ಧರಿಸಿರುತ್ತಾನೆ. ಹಳದಿ ಬಣ್ಣದ ಮೇಲೆ ಹಳದಿ ಕಪ್ಪು ಮಿಶ್ರಿತ ಹುಲಿ ಚರ್ಮದ ಮೇಲಿನ ಪಟ್ಟಿಗೆಗಳನ್ನು ಮಾಡಿರುತ್ತಾರೆ. ಅರಿವೆಯಿಂದ ಬಾಲವನ್ನು ಮಾಡಿರುತ್ತಾರೆ. ಕೆಲವರು ಉದ್ದವಾದ ಚೂಪಾದ ಉಗುರುಗಳನ್ನು ಕೈಯ ಬೆರಳುಗುರುಗಳಿಗೆ ಹಾಕಿಕೊಂಡಿರುತ್ತಾರೆ. ಬಣ್ಣ ಹಾಕಿದ ಮೇಲೆ ವೇಷಗಾರನಿಗೆ ಏನೂ ಆಗಬಾರದೆಂದು ರಟ್ಟೆಗೆ ನಿಂಬೆಹಣ್ಣು, ಕರಿದಾರ ಕಟ್ಟಿರುತ್ತಾರೆ. ಹುಲಿ ವೇಷ ಹಾಕುವವರು ದೇಹವನ್ನು ಹೆಚ್ಚು ತಂಪಾಗಿ ಇಟ್ಟಿರಬೇಕು. ದೇಹ ತಂಪಾಗದಿದ್ದರೆ ಬಣ್ಣ ಸರಿಯಾಗಿ ಅಂಟುವುದಿಲ್ಲ. ಹಲವು ದಿನ ಬಣ್ಣದಲ್ಲೇ ಇರುವುದರಿಂದ ದೇಹ ತಂಪಾಗದಿದ್ದರೆ ಚರ್ಮಕ್ಕೂ ಸಮಸ್ಯೆ ಕಟ್ಟಿ್ಟ್ಟ ಬುತ್ತಿ.ಹುಲಿವೇಷಧಾರಿಗೆ ಹೆಜ್ಜೆಗಾರಿಕೆಯ ಪರಿಚಯ ಇರಲೇಬೇಕು. ತಮಟೆಯ ವಾದ್ಯಗಳ ಗತ್ತಿಗೆ ತಕ್ಕಂತೆ ಹುಲಿ ವೇಷಧಾರಿ ಕುಣಿಯುತ್ತಾನೆ. ವಾದ್ಯಗಳ ಬಡಿತ ತೀವ್ರವಾದಂತೆ ಕುಣಿತ ತೀವ್ರವಾಗುತ್ತದೆ. ಹುಲಿವೇಷ ಧರಿಸಿದವರು ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಪ್ರದರ್ಶನ ನೀಡುತ್ತಾರೆ.