DAKSHINA KANNADA
ಈ ವಿದ್ಯಾರ್ಥಿಗಳು ಮಾಡಿರುವ ಕೆಲಸ ನೋಡಿದ್ರೆ ನೀವು ಭೇಷ್ ಅಂತೀರಾ …

ಪುತ್ತೂರು, ಡಿಸೆಂಬರ್ 24: ಚೆಲುವೆಯ ಅಂದದ ಮೊಗಕೆ ಕೇಶವೂ ಭೂಷಣ. ಕೇಶವನ್ನು ಯಾವ ರೀತಿಯೆಲ್ಲಾ ಶೃಂಗರಿಸಿ ಅಂದವಾಗುವಂತೆ ಮಾಡೋದು ಪ್ರತಿಯೊಬ್ಬ ಹೆಣ್ಣಿನ ಆಶೆಯೂ ಕೂಡಾ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕೆಲವು ವಿದ್ಯಾರ್ಥಿಗಳು ಈ ಅಂದದ ಕೇಶ ರಾಶಿಯನ್ನು ದಾನ ಮಾಡಲು ತೀರ್ಮಾನಿಸಿದ್ದಾರೆ. ಕ್ಯಾನ್ಸರ್ ನಂತಹ ಮಹಾ ಮಾರಿಗೆ ಸಿಲುಕಿ ತಲೆಗೂದಲನ್ನು ಕಳೆದುಕೊಂಡವರಿಗೆ ಈ ವಿದ್ಯಾರ್ಥಿಗಳು ತಮ್ಮ ಕೇಶ ನೀಡಲಿದ್ದಾರೆ.
ಹೆಣ್ಣಿನ ಸೌಂದರ್ಯಕ್ಕೆ ಯಾವ ರೀತಿ ಕಣ್ಣು,ಮೂಗು,ಬಾಯಿ ಭೂಷಣವೋ, ಅದೇ ರೀತಿ ಹೆಣ್ಣಿನ ಸೌಂದರ್ಯವನ್ನು ಇನ್ನಷ್ಟು ಮೆರಗುಗೊಳಿಸೋದು ಆಕೆಯ ಸುಂದರ ಕೇಶ ರಾಶಿ. ಇಂತಹ ಕೇಶ ರಾಶಿಯನ್ನು ತಮ್ಮಂತೆಯೇ ಇತರರೂ ಹೊಂದಬೇಕು ಎನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ತಂಡವೊಂದು ಸಿದ್ಧತೆ ನಡೆಸಿದೆ. ದಕ್ಷಿಣಕನ್ನಡ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9 ಮಂದಿ ವಿದ್ಯಾರ್ಥಿಗಳು ಈ ರೀತಿಯ ಪ್ರಯತ್ನವೊಂದಕ್ಕೆ ಕೈ ಹಾಕಿದೆ. ಇಲ್ಲಿನ ವಿದ್ಯಾರ್ಥಿನಿಯೊಬ್ಬಳು ಮಡಿಕೇರಿಯ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಆಕೆಗೆ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿಯೊಬ್ಬರು ಒಂದು ದಿನ ತಲೆಗೆ ಸ್ಕಾರ್ಫ್ ಹಾಕಿ ಬಂದಿದ್ದರು.

ಇದಕ್ಕೆ ಕಾರಣವೇನು ಎನ್ನುವುದನ್ನು ಕಂಡುಕೊಂಡಾಗ ಶಿಕ್ಷಕಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಆ ವಿದ್ಯಾರ್ಥಿನಿಗೆ ದೊರೆತ್ತಿರುತ್ತದೆ. ಕ್ಯಾನ್ಸರ್ ನಿಂದ ಮುಕ್ತಿ ಪಡೆಯಲು ಕಿಮೋಥೆರಪಿ ಮಾಡಿಸಿಕೊಂಡ ಕಾರಣ ಆ ಶಿಕ್ಷಕಿಯ ಇಡೀ ಕೇಶ ರಾಶಿಯೇ ಉದುರಿ ಹೋಗಿತ್ತು. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಎಲ್ಲಾ ರೋಗಿಗಳ ಕಥೆಯೂ ಇದೇ ಎಂದು ಮನಗಂಡ ವಿದ್ಯಾರ್ಥಿನಿ ಇದೀಗ ಕಲಿಯುತ್ತಿರುವ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಹಪಾಠಿಗಳಲ್ಲಿ ಇಂಥಹ ರೋಗಿಗಳಿಗೆ ತಮ್ಮ ಕೈಲಾದ ಸಹಾಯ ಮಾಡಬೇಕು ಎನ್ನುವ ಯೋಚನೆಯನ್ನು ಬಿತ್ತುತ್ತಾರೆ.
ತಲೆಗೂದಲಿಲ್ಲದೆ ಹೆಣ್ಣು ಮಗುವೊಬ್ಬಳು ಯಾವ ರೀತಿಯ ಸಂಕಟ ಪಡುತ್ತಾಳೆ ಎನ್ನುವುದನ್ನು ಮನಗಂಡಿದ್ದ ವಿದ್ಯಾರ್ಥಿಗಳು ತಮ್ಮ ತಲೆಗೂದಲನ್ನು ಕ್ಯಾನ್ಸರ್ ನಿಂದಾಗಿ ತಲೆಗೂದಲು ಕಳೆದುಕೊಂಡವರಿಗೆ ದಾನವಾಗಿ ನೀಡಲು ತೀರ್ಮಾನಿಸಿದ್ದಾರೆ. ಚೆನೈನ ಕ್ಯಾನ್ಸರ್ ರೋಗಿಗಳ ಭವಿಷ್ಯಕ್ಕಾಗಿ ದುಡಿಯುತ್ತಿರುವ ಎನ್.ಜಿ.ಒ ಜೊತೆ ಸೇರಿ ವಿದ್ಯಾರ್ಥಿಗಳು ಈ ಕೇಶ ದಾನದ ದೃಢ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ತಮ್ಮ ವಯಸ್ಸಿನ ವಿದ್ಯಾರ್ಥಿಗಳಿಗೆ ಈ ವಿಚಾರವನ್ನು ಮನವೊಲಿಸಿ ಅವರಲ್ಲೂ ಕೇಶ ದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಚೆನೈನಲ್ಲಿರುವ ಎನ್.ಜಿ.ಒ ಕಂಪನಿ ಕ್ಯಾನ್ಸರ್ ನಿಂದಾಗಿ ತಲೆಗೂದಲು ಕಳೆದುಕೊಂಡವರಿಗಾಗಿ ಉಚಿತವಾಗಿ ವಿಗ್ ನೀಡುತ್ತಿದ್ದು, ಈ ವಿಗ್ ಗಾಗಿ ತಲೆಗೂದಲನ್ನು ಪುತ್ತೂರಿನ ಈ ವಿದ್ಯಾರ್ಥಿಗಳು ಪೂರೈಸಲಿದ್ದಾರೆ. ಈಗಾಗಲೇ 50 ವಿದ್ಯಾರ್ಥಿಗಳನ್ನು ತಮ್ಮ ಜೊತೆ ಸೇರಿಸಿಕೊಂಡಿರುವ ಈ ವಿದ್ಯಾರ್ಥಿಗಳ ತಂಡ ಇನ್ನಷ್ಟು ಜನರನ್ನು ತಮ್ಮ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ.
8 ರಿಂದ 12 ಇಂಚಿನ ತನಕ ಉದ್ದವಿರುವ ತಲೆಗೂದಲು ಹೊಂದಿರುವ ಮಹಿಳೆ,ಪುರುಷ ಹಾಗೂ ಎಲ್ಲಾ ವಿಭಾಗದವರೂ ತಮ್ಮ ತಲೆಗೂದಲನ್ನು ಈ ವಿದ್ಯಾರ್ಥಿಗಳಿಗೆ ನೀಡಬಹುದಾಗಿದೆ. ತಲಗೂದಲನ್ನು ನೀಡಲು ಇಚ್ಛಿಸುವವರು ಈ ವಿದ್ಯಾರ್ಥಿಗಳನ್ನು ಸಂಪರ್ಕಿಸಿದಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಈ ವಿದ್ಯಾರ್ಥಿಗಳು ನಿರ್ವಹಿಸಲಿದ್ದಾರೆ. ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 50 ಸಾವಿರಕ್ಕೂ ಮಿಕ್ಕಿದ ಜನ ಕ್ಯಾನ್ಸರ್ ರೋಗದಿಂದಾಗಿ ತಮ್ಮ ತಲೆಗೂದಲನ್ನು ಕಳೆದುಕೊಂಡಿದ್ದಾರೆ. ಅದೇ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಸಂಖ್ಯೆ 17 ಸಾವಿರದಷ್ಟಿದ್ದು,ಇಂಥವರಿಗೆ ವಿಗ್ ನೀಡುವ ಇಚ್ಛೆ ಈ ವಿದ್ಯಾರ್ಥಿಗಳದ್ದಾಗಿದೆ.
ಈಗಾಗಲೇ ಕೆಲವು ವಿದ್ಯಾರ್ಥಿಗಳು ತಮ್ಮ ತಲೆಗೂದಲನ್ನು ದಾನ ಮಾಡಿದ್ದು, ಇನ್ನ ಕೆಲವು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರೂ ಮಕ್ಕಳ ಈ ಕೇಶದಾನ ಯೋಚನೆಗೆ ಸ್ಪಂದನೆ ನೀಡಿದ್ದಾರೆ. ಕ್ಯಾನ್ಸರ್ ರೋಗಿಳಿಗಾಗಿ ಮಿಡಿದ ಈ ವಿದ್ಯಾರ್ಥಿಗಳ ಕಾರ್ಯಕ್ಕೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.