DAKSHINA KANNADA
ಪುತ್ತೂರು: ಶಾಲೆಗೆ ತೆರಳಿ ನಾಪತ್ತೆಯಾದ ವಿದ್ಯಾರ್ಥಿನಿ ಪ್ರಕರಣ ಸುಖಾಂತ್ಯ-ಕಾಸರಗೋಡಿನಲ್ಲಿ ಪತ್ತೆ..!
ಪುತ್ತೂರು: ಮನೆಯಿಂದ ಶಾಲೆಗೆಂದು ಹೋದ ವಿದ್ಯಾರ್ಥಿನಿ ಅತ್ತ ಶಾಲೆಗೂ ಬಾರದೆ, ಇತ್ತ ಮನೆಗೂ ಹಿಂದಿರುಗದೆ ನಾಪತ್ತೆಯಾಗಿದ್ದ ಪ್ರಕರಣ ಕೊನೆಗೂ ಬಾಲಕಿಯ ಪತ್ತೆಯೊಂದಿಗೆ ಸುಖಾಂತ್ಯ ಕಂಡಿದೆ.
ಪುತ್ತೂರಿನ ಬಳ್ಕಾಡ್ ನಿವಾಸಿಯೋರ್ವರ ಪುತ್ರಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಗುರುವಾರ ನಾಪತ್ತೆಯಾಗಿದ್ದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಸತತ ಹುಡುಕಾಟದ ಬಳಿಕ ಕಾಸರಗೋಡಿನಲ್ಲಿ ಪತ್ತೆಯಾಗಿದ್ದಾಳೆ. ಮನೆಮಂದಿ ಪೊಲೀಸರೊಂದಿಗೆ ಕಾಸರಗೋಡಿಗೆ ತೆರಳಿ ಬಾಲಕಿಯನ್ನು ಪುತ್ತೂರಿಗೆ ಕರಕೊಂಡು ಬಂದಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಎಂದಿನಂತೆ ಬೆಳಿಗ್ಗೆ ಮನೆಯಿಂದ ಇತರ ಮಕ್ಕಳ ಜೊತೆ KSRTC ಸಂಸ್ಥೆ ಬಸ್ಸಿನಲ್ಲಿ ಶಾಲೆಗೆಂದು ಬಂದಿದ್ದಳು. ಶಾಲೆಯಲ್ಲಿ ಗುರುವಾರ ಪರೀಕ್ಷೆ ಇತ್ತು ಎನ್ನಲಾಗಿದ್ದು, ವಿದ್ಯಾರ್ಥಿನಿ ಶಾಲೆಗೆ ಹೋಗದೆ ನೇರವಾಗಿ ಕಾಸರಗೋಡಿನ ಪರ್ಲಡ್ಕದ ಬಾಲವನಕ್ಕೆ ತೆರಳಿದ್ದಳು. ಐಡಿ ಕಾರ್ಡ್ ಇಲ್ಲದ ಕಾರಣ ಬಾಲವನದ ಸಿಬ್ಬಂದಿ ಆಕೆಯನ್ನು ಒಳಗೆ ಬಿಟ್ಟಿರಲಿಲ್ಲ. ಅಲ್ಲಿಂದ ಹಿಂದಿರುಗಿ ಬಂದು ಪರ್ಲಡ್ಕದಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ತೆರಳಿ ನಾನು ಶಾಲೆಗೆ ಹೋಗಿಲ್ಲ, ಇಂದು ಇಲ್ಲಿ ಇರುವುದಾಗಿ ಹೇಳಿದ್ದಾಳೆ. ಸಂಬಂಧಿಕರ ಮನೆಮಂದಿ ಆಕೆಯನ್ನು ಶಾಲೆಗೆ ಬಿಟ್ಟು ಬರಲು ಮುಂದಾದಾಗ ಅಲ್ಲಿಂದಲೂ ತಪ್ಪಿಸಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ನಗರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಸಂಜೆಯಾಗುತ್ತಲೇ ಬಾಲಕಿ ಪತ್ತೆಯಾಗುವುದರೊಂದಿಗೆ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು ಮನೆಯವರು ನಿಟ್ಟಿಸಿರು ಬಿಟ್ಟಿದ್ದಾರೆ.