DAKSHINA KANNADA
ಹುಲಿ ಕುಣಿತದಲ್ಲಿ ಸ್ಟೆಪ್ ಹಾಕಿದ ಪುತ್ತೂರು ಶಾಸಕ ಸಂಜೀವ ಮಠಂದೂರು…
ಪುತ್ತೂರು, ಅಕ್ಟೋಬರ್ 02 : ಹುಲಿ ಕುಣಿತ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನವರಾತ್ರಿಯಲ್ಲಿ ಕಂಡು ಬರುವ ಅತ್ಯಂತ ಮನೋರಂಜನಾ ಕಲೆಯಾಗಿ ಮೂಡಿ ಬಂದಿದೆ. ಹುಲಿ ವೇಷದ ತಾಸೆಯ ಶಬ್ದಕ್ಕೆ ಹೆಜ್ಜೆ ಹಾಕದ ಮಂದಿ ಅವಿಭಜಿತ ಜಿಲ್ಲೆಯಲ್ಲಿರುವುದು ವಿರಳವೇ.
ಬಡವನದಿಂದ ಹಿಡಿದು ಬಲ್ಲಿದನನ್ನೂ ಹುಚ್ಚೆದ್ದು ಕುಣಿಸುವ ಈ ಹುಲಿ ಕುಣಿತದಲ್ಲಿ ಜನಪ್ರತಿನಿಧಿಗಳೂ ಕುಣಿಯುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಕೂಡಾ ಇದೇ ರೀತಿ ಹುಲಿ ವೇಷಧಾರಿಗೊಂದಿಗೆ ತಾಸೆ ಬಡಿತಕ್ಕೆ ಹೆಜ್ಜೆ ಹಾಕುವ ಮೂಲಕ ಗುರುತಿಸಿಕೊಂಡಿದ್ದಾರೆ.
ಪುತ್ತೂರು ಮಿನಿ ವಿಧಾನಸೌಧದ ಮುಂದೆ ಅಧಿಕಾರಿಗಳು ಹಾಗು ಶಾಸಕರ ನೇತೃತ್ವದಲ್ಲಿ ಹುಲಿ ವೇಷಧಾರಿಗಳ ಕುಣಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಹುಲಿ ವೇಷಧಾರಿಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಶಾಸಕರೂ ಹುಲಿ ಹೆಜ್ಜೆ ಹಾಕಿ ಮನೋರಂಜನೆ ನೀಡಿದ್ದಾರೆ. ಶಾಸಕರಿಗೆ ಸ್ಥಳದಲ್ಲಿ ಉಪಸ್ಥಿತರಿದ್ದರೂ ಸಾರ್ವಜನಿಕರೂ ಸಾಥ್ ನೀಡಿದ್ದಾರೆ.