DAKSHINA KANNADA
ಶಾಸಕ ಅಶೋಕ್ ರೈ ಬೆಂಬಲಿಗ ಗುರುಪ್ರಸಾದ್ ರೈ ಮನೆಗೆ ನುಗ್ಗಿ ದರೋಡೆ…..!!
ಪುತ್ತೂರು ಸೆಪ್ಟೆಂಬರ್ 07: ಪುತ್ತೂರು ಶಾಸಕ ಅಶೋಕ್ ರೈ ಬೆಂಬಲಿಗ ಗ್ರಾಮಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಮನೆಗೆ ದರೋಡೆಕೋರರು ನುಗ್ಗಿ ಮನೆ ಮಂದಿಯನ್ನು ಕಟ್ಟಿ ಹಾಕಿ ನಗ-ನಗದು ದರೋಡೆ ಮಾಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುದ್ಕಾಡಿ ಎಂಬಲ್ಲಿ ನಡೆದಿದೆ.
ಬಡಗನ್ನೂರು ಗ್ರಾಮಪಂಚಾಯತ್ ನ ಮಾಜಿ ಸದಸ್ಯ ಗುರುಪ್ರಸಾದ್ ರೈ ಎಂಬವರ ಮನೆಯಲ್ಲಿ ಈ ದರೋಡೆ ನಡೆದಿದ್ದು ಸೆಪ್ಟೆಂಬರ್ 7 ರ ಮುಂಜಾನೆ ಸುಮಾರು 2 ಗಂಟೆಗೆ ಮನೆಯ ಬಾಗಿಲು ಒಡೆದು ನುಗ್ಗಿದ ಸುಮಾರು 8 ಮಂದಿ ದರೋಡೆಕೋರರ ತಂಡ ಗುರುಪ್ರಸಾದ್ ಅವರನ್ನು ಕಟ್ಟಿಹಾಕಿ, ಕುತ್ತಿಗೆಗೆ ಚಾಕು ಹಿಡಿದು ಕಪಾಟಿನಲ್ಲಿದ್ದ ಸುಮಾರು 40 ಸಾವಿರ ರೂಪಾಯಿ ಮತ್ತು ಸುಮಾರು 15 ಪವನ್ ಚಿನ್ನವನ್ನು ದರೋಡೆ ಮಾಡಿದೆ. ಮನೆಯೊಳಗೆ ನುಗ್ಗಿದ ದರೋಡೆಕೋರರ ತಂಡ ಸುಮಾರು ಒಂದೂವರೆ ಗಂಟೆಗಳವರೆಗೆ ಮನೆಯೊಳಗೇ ಇದ್ದು, ಮನೆಯ ಎಲ್ಲಾ ಕಡೆಗಳಲ್ಲೂ ಹುಡುಕಾಡಿದೆ. ತುಳು ಮತ್ತು ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದ ದರೋಡೆಕೋರರ ತಂಡ ಹಿಂಬಾಗಿಲಿನಿಂದ ಹೊರಗೆ ಹೋಗಿ ತಪ್ಪಿಸಿಕೊಂಡಿದೆ. ಹೊರಗೆ ಹೋಗುವ ಸಮಯದಲ್ಲಿ ಗುರು ಪ್ರಸಾದ್ ಅವರ ಕಟ್ಟಿದ ಕೈಗಳನ್ನು ಬಿಚ್ಚಿ ದರೋಡೆಕೋರರು ಪರಾರಿಯಾಗಿದ್ದು, ಗುರುಪ್ರಸಾದ್ ಅವರ ಮೊಬೈಲ್ ಅನ್ನು ನೀರಿಗೆ ಹಾಕಿ ಹಾನಿ ಮಾಡಿದ್ದಾರೆ.
ಘಟನೆಯ ಬಗ್ಗೆ ಗುರುಪ್ರಸಾದ್ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ, ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಸೇರಿದಂತೆ ಹಲವು ಪೋಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಜ.ರಿಷ್ಯಂತ್ ಮುಂಜಾನೆ ಸುಮಾರು 2 ಗಂಟೆಗೆ ಈ ಕೃತ್ಯ ನಡೆದಿದ್ದು, ದೂರುದಾರರ ಪ್ರಕಾರ ಸುಮಾರು 40 ಸಾವಿರ ರೂಪಾಯಿ ಹಾಗು ಚಿನ್ನ ದರೋಡೆ ಮಾಡಲಾಗಿದ್ದು, ದರೋಡೆ ಮಾಡಲಾದ ಚಿನ್ನ ಎಷ್ಟು ಅನ್ನೋದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಈಗಾಗಲೇ ಬೆರಳಚ್ಷು ತಜ್ಞರ ತಂಡ, ಶ್ವಾನದಳ, ವಿಧಿ-ವಿಜ್ಞಾನ ತಂಡ ಪರಿಶೀಲನೆಯನ್ನು ನಡೆಸಿದ್ದು, ದರೋಡೆಕೋರರ ಶೀಘ್ರವೇ ಬಂಧಿಸಲಾಗುವುದು. ಘಟನೆಗೆ ಸಂಬಂಧಿಸಿದಂತೆ ಪೋಲೀಸರ ಒಂದು ವಿಶೇಷ ತಂಡವನ್ನೂ ರಚಿಸಲಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯಲಿದೆ ಎಂದರು. ಪುತ್ತೂರು ಆಸುಪಾಸಿನಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗುತ್ತಿರುವ ಹಿನ್ಮಲೆಯಲ್ಲಿ ಈ ಬಗ್ಗೆಯೂ ಸೂಕ್ತ ತನಿಖೆ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
ಘಟನೆಯ ಕುರಿತು ಮಾಹಿತಿ ನೀಡಿದ ಮನೆ ಯಜಮಾನ ಗುರುಪ್ರಸಾದ್ ರೈ, ಮನೆಯಲ್ಲಿ ನಾನೊಬ್ಬನೇ ಹೆಚ್ಚಾಗಿ ಇರುತ್ತಿದ್ದು, ನಿನ್ನೆ ತಾಯಿ ಮನೆಗೆ ಬಂದಿದ್ದರು. ಮನೆಯ ಪಕ್ಕದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತಾಯಿ ನಿನ್ನೆ ಮನೆಯಲ್ಲಿ ತಂಗಿದ್ದರು. ಆ ಕಾರಣ ಅವರ ಚಿನ್ನದ ಜೊತೆಗೆ ಕಪಾಟಿನಲ್ಲಿದ್ದ 25 ಸಾವಿರ ಮತ್ತು ನನ್ನ ಪರ್ಸ್ ನಲ್ಲಿದ್ದ ಹಣವನ್ನು ದರೋಡೆಕೋರರು ದರೋಡೆ ಮಾಡಿದ್ದಾರೆ. ಮನೆಗೆ ನುಗ್ಗಿದವರೆಲ್ಲಾ ಮುಸುಕು ಹಾಕಿಕೊಂಡಿದ್ದು, ತುಳು ಮತ್ತು ಕನ್ನಡ ಭಾಷೆ ಮಾತನಾಡುತ್ತಿದ್ದರು. ನನಗೆ ವೈಯುಕ್ತಿಕವಾಗಿ ಯಾರಲ್ಲಿಯೂ ಹಗೆತನವಿಲ್ಲ ಎಂದು ತಿಳಿಸಿದರು.
ಅತ್ಯಂತ ನಿರ್ಜನ ಪ್ರದೇಶದಲ್ಲಿರುವ ಗುರುಪ್ರಸಾದ್ ಮನೆಯನ್ನೇ ದರೋಡೆಕೋರರು ಟಾರ್ಗೆಟ್ ಮಾಡಿರುವುದು ಕುಗ್ರಾಮದ ಜನತೆಯಲ್ಲಿ ಆತಂಕಕ್ಕೂ ಕಾರಣವಾಗಿದೆ.