DAKSHINA KANNADA
ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರ ಮನೆ ನೆಲಸಮ ಪ್ರಕರಣ – ಕೇಸ್ ದಾಖಲಿಸಿದ ಪೊಲೀಸರು
ಪುತ್ತೂರು ಫೆಬ್ರವರಿ 05: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹೆಸರಲ್ಲಿ ಯಾವುದೇ ಮುನ್ಸೂಚನೆ ನೀಡದೆ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರ ಮನೆ ಧ್ವಂಸ ಮಾಡಿದವರ ಮೇಲೆ ಪುತ್ತೂರು ನಗರಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಿನ್ನೆ ತಡರಾತ್ರಿ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರ ಮನೆಯನ್ನು ನೆಲಸಮ ಮಾಡಲಾಗಿತ್ತು. ಮುಸುಕ ಧಾರಿಗಳು ಓಮ್ನಿ ಕಾರಿನಲ್ಲಿ ಬಂದು ನೆಲಸಮ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಮನೆಯಲ್ಲಿದ್ದ ನಾಯಿ ಮರಿ ಮಣ್ಣಿನಡಿ ಸಿಲುಕಿ ಸಾವನಪ್ಪಿದ್ದು, ಅಲ್ಲದೆ 32 ಗ್ರಾಂ ಚಿನ್ನ, ದಾಖಲೆ ಪತ್ರ, ಹಣಗಳನ್ನೆಲ್ಲ ಮುಸುಧಾರಿಗಳು ದೋಚಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನಲೆ ಬಿಜೆಪುಿ ಕಾರ್ಯಕರ್ತರು ಪುತ್ತೂರು ನಗರ ಪೋಲಿಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ಅಲ್ಲದೆ ದರೋಡೆ ಪ್ರಕರಣ ದಾಖಲಿಸುವಂತೆ ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು, ಈ ವೇಳೆ ಪೊಲೀಸ್ ಠಾಣೆಗೆ ಆಗಮಿಸಿದ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು ಆಗಮಿಸಿ ಯಾವುದೇ ಸೂಚನೆ ನೀಡದೇ ರಾಜೇಶ್ ಬನ್ನೂರು ಅವರ ಮನೆ ಧ್ವಂಸಗೊಳಿಸಿದವರ ಮೇಲೆ ಕೇಸ್ ಹಾಕುವಂತೆ ಒತ್ತಾಯಿಸಿದರು. ಕೊನೇ ಕ್ಷಣದಲ್ಲಿ ಪುತ್ತೂರು ನಗರಠಾಣಾ ಪೊಲೀಸರು ಪುತ್ತೂರು ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಟ್ರಸ್ಟಿ ವಿನಯ ಸುವರ್ಣ ಮತ್ತು ಇತರರ ಮೇಲೆ ಕೇಸ್ ದಾಖಲಿಸಿದ್ದಾರೆ.