DAKSHINA KANNADA
ಪುತ್ತೂರು -ಅಪಾಯಕಾರಿ ಕಟ್ಟಡದಲ್ಲಿ ಹೋಟೆಲ್ – ನ್ಯಾಯಾಲಯದ ಆದೇಶದಂತೆ ಹೋಟೆಲ್ ಗೆ ಬೀಗ ಜಡಿದ ಅಧಿಕಾರಿಗಳು

ಪುತ್ತೂರು ಎಪ್ರಿಲ್ 11: ಅಪಾಯಕಾರಿ ಕಟ್ಟಡವೊಂದರಲ್ಲಿ ಹೋಟೆಲ್ ಒಂದು ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಬಂಟ್ವಾಳ ನ್ಯಾಯಾಲಯವೇ ಮಧ್ಯಪ್ರವೇಶಿಸಿ ಹೋಟೆಲ್ ಅನ್ನ ಮುಚ್ಚಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ನಗರದ ಮಧ್ಯೆ ಕಾರ್ಯಾಚರಿಸುತ್ತಿದ್ದ ಈ ಹೋಟೆಲ್ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನಲೆಯಲ್ಲಿ ಬಂಟ್ವಾಳ ನ್ಯಾಯಾಲಯದ ರಿಸೀವರ್ ಈ ಪ್ರಕ್ರಿಯೆಯನ್ನು ನಡೆಸಿದ್ದು, ಅಪಾಯಕಾರಿ ಕಟ್ಟಡದಲ್ಲಿರುವ ಇತರ ಅಂಗಡಿಗಳ ಮೇಲೂ ಇದೇ ರೀತಿಯ ಕ್ರಮದ ಆತಂಕ ನಿರ್ಮಾಣವಾಗಿದೆ.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಈ ಕಟ್ಟಡ ಇಂದೋ,ನಾಳೆಯೋ ಕುಸಿಯುವ ಹಂತದಲ್ಲಿದೆ. ಈ ನಡುವೆಯೂ ಈ ಕಟ್ಟಡದಲ್ಲಿ ಹತ್ತಕ್ಕೂ ಮಿಕ್ಕಿದ ಅಂಗಡಿಗಳು ಕಾರ್ಯಾಚರಿಸುತ್ತಿದ್ದು,ಈ ಅಂಗಡಿಗಳಲ್ಲಿ ಇಂದು ನ್ಯಾಯಾಲಯದಿಂದ ತೆರವುಗೊಳಿಸಲ್ಪಟ್ಟ ಹೋಟೆಲ್ ಕೂಡಾ ಸೇರಿದ್ದು, ಹೋಟೆಲ್ ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಈ ಕಟ್ಟಡ ಅಪಾಯಕಾರಿಯಾಗಿದೆ ಎಂದು ಪುತ್ತೂರು ನಗರ ಸಭೆ ಈಗಾಗಲೇ ಕಟ್ಟಡಕ್ಕೆ ಸಂಬಂಧಪಟ್ಟವರಿಗೆ ಕಟ್ಟಡವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದೆ.
ಆದರೆ ಈವರೆಗೂ ಈ ಕಟ್ಟಡವನ್ನು ತೆರವುಗೊಳಿಸದೆ, ಅದೇ ಅಪಾಯಕಾರಿ ಕಟ್ಟಡದಲ್ಲಿ ಅಂಗಡಿಗಳನ್ನು ಬಾಡಿಗೆಗೆ ನೀಡುವ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಅದೇ ಪ್ರಕಾರ ಹೋಟೆಲ್ ಕೂಡಾ ಬಾಡಿಗೆಯ ಆಧಾರದಲ್ಲಿ ಕಾರ್ಯಾಚರಿಸುತ್ತಿತ್ತು. ಈ ಹೋಟೆಲ್ ಸೇರಿದಂತೆ ಈ ಕಟ್ಡಡದಲ್ಲಿರುವ ಯಾವುದೇ ಅಂಗಡಿಗೆ ನಗರ ಸಭೆ ಈವರೆಗೂ ವ್ಯಾಪಾರದ ಪರವಾನಗಿಯನ್ನು ನೀಡಿಲ್ಲ. ಆದರೆ ಇದೀಗ ಕೇವಲ ಹೋಟೆಲನ್ನು ಮಾತ್ರ ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿರುವುದು ಹೋಟೆಲ್ ಮಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ನ್ಯಾಯಾಲಯದಿಂದ ನೇಮಿಸಲ್ಪಟ್ಟ ರಿಸೀವರ್ ತಮ್ಮ ಬಳಿ 5 ಲಕ್ಷ ರೂಪಾಯಿ ಲಂಚ ಕೇಳಿದ್ದರು. ಹಣ ನೀಡದ ದ್ವೇಷದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.

ಹೋಟೆಲ್ ಬಂದ್ ಮಾಡಿ, ಅದರ ಕೀಲಿ ಕೈಯನ್ನು ರಿಸೀವರ್ ಕೈಗೆ ನೀಡುವಂತೆ ಬಂಟ್ವಾಳ ನ್ಯಾಯಾಲಯ ಆದೇಶಿಸಿದ ಹಿನ್ನಲೆಯಲ್ಲಿ ಪುತ್ತೂರು ನಗರ ಸಭೆಯ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಆಗಮಿಸಿ ಹೋಟೆಲ್ ಮುಚ್ಚಿಸಿದ್ದಾರೆ. ಈ ನಡುವೆ ಹೋಟೆಲ್ ಬಿಟ್ಟು ತೆರಳುವುದಿಲ್ಲ ಎಂದು ಹೋಟೆಲ್ ಮಾಲಕಿ ಪಟ್ಟು ಹಿಡಿದ ಘಟನೆಯೂ ನಡೆದಿದ್ದು, ಪೋಲೀಸರು ಮತ್ತು ಅಧಿಕಾರಿಗಳು ಬಲವಂತವಾಗಿ ಮಾಲಕಿಯನ್ನು ಹೋಟೆಲ್ ನಿಂದ ಹೊರ ಹಾಕಿದ್ದಾರೆ.
ಅಪಾಯಕಾರಿ ಕಟ್ಟಡ ಎನ್ನುವ ಕಾರಣಕ್ಕೆ ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಅಂಗಡಿಗಳಿಗೆ ನಗರಸಭೆ ಪರವಾನಗಿ ನೀಡಿಲ್ಲ. ಆದರೆ ಕೇವಲ ಹೋಟೆಲನ್ನು ಮಾತ್ರ ಟಾರ್ಗೆಟ್ ಮಾಡಿರುವುದರ ಹಿಂದೆ ಕಾಣದ ಕೈಗಳ ಕೈವಾಡದ ಆರೋಪವೂ ಕೇಳಿ ಬಂದಿದೆ.
1 Comment