DAKSHINA KANNADA
ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ವಿಚಾರ ಕಾಂಗ್ರೇಸ್ ಟೂಲ್ ಕಿಟ್ ಆಗಿ ಉಪಯೋಗಿಸುತ್ತಿದೆ…!!
ಪುತ್ತೂರು ಮಾರ್ಚ್ 29: ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಬಿಜೆಪಿ ಎಲ್ಲಾ ರೀತಿಯ ಬೆಂಬಲವನ್ನು ನೀಡಲಿದ್ದು, ಇದೇ ಕಾರಣಕ್ಕಾಗಿಯೇ ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕೆಲಸವನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಮಾಡಿದ್ದಾರೆ ಎಂದು ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್.ಸಿ.ನಾರಾಯಣ್ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಮಾಡಬೇಕೆಂದು ವಿವಿಧ ಸಂಘಟನೆಗಳು ಸೇರಿಕೊಂಡು ಸರಕಾರದ ಮುಂದೆ ಹಕ್ಕೊತ್ತಾಯ ಮಾಡುತ್ತಿದ್ದು, ಈ ಹಕ್ಕೊತ್ತಾಯಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.
ಆದರೆ ಈ ಸಂಘಟನೆಗೆ ಕಾಂಗ್ರೇಸ್ ಪಕ್ಷದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಸಂಚಾಲಕರಾಗಿ ಮಾಡಿರುವುದಕ್ಕೆ ನಮ್ಮ ವಿರೋಧವಿದೆ. ಅಲ್ಲದೆ ಕಾಂಗ್ರೇಸ್ ಇದೇ ವಿಚಾರವನ್ನಿಟ್ಟುಕೊಂಡು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ಸರಕಾರಿ ಮೆಡಿಕಲ್ ಕಾಲೇಜು ವಿಚಾರವನ್ನು ಕಾಂಗ್ರೆಸ್ ತನ್ನ ಟೂಲ್ ಕಿಟ್ ಆಗಿ ಉಪಯೋಗಿಸಿಕೊಂಡಿದ್ದು, ಈ ಪ್ರಯತ್ನಕ್ಕೆ ಪುತ್ತೂರಿನ ಜನ ಬೆಂಬಲಿಸುವುದಿಲ್ಲ ಎಂದರು. ಪುತ್ತೂರು ಸರಕಾರಿ ಆಸ್ಪತ್ರೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಹೊರತುಪಡಿಸಿ ಜಿಲ್ಲೆಯ ಎರಡನೇ ದೊಡ್ಡ ಆಸ್ಪತ್ರೆಯಾಗಿದ್ದು, ಈಗಾಗಲೇ 100 ಹಾಸಿಗೆಯ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಆಸ್ಪತ್ರೆಯನ್ನು ಎಲ್ಲಾ ವಿಧದಲ್ಲಿ ಮೇಲ್ದರ್ಜೆಗೇರಿಸುವ ಪ್ರಯತ್ನವನ್ನು ಶಾಸಕರು ಮಾಡಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.