DAKSHINA KANNADA
ಪುತ್ತೂರು ಪದವಿ ವಿಧ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣ ಐವರು ಆರೋಪಿಗಳ ವಿರುದ್ದ ಆರೋಪ ಪಟ್ಟಿ

ಪುತ್ತೂರು ಪದವಿ ವಿಧ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣ ಐವರು ಆರೋಪಿಗಳ ವಿರುದ್ದ ಆರೋಪ ಪಟ್ಟಿ
ಪುತ್ತೂರು ಅಕ್ಟೋಬರ್ 10: ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಪುತ್ತೂರು ಪದವಿ ವಿಧ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ವಿರುದ್ದ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಸಾಮೂಹಿಕ ಅತ್ಯಾಚಾರದ ಆರೋಪಿಗಳಾದ ಗುರುನಂದನ್ (19), ಪ್ರಜ್ವಲ್ (19), ಕಿಶನ್ (19), ಸುನೀಲ್ (19) ಹಾಗೂ ಪ್ರಖ್ಯಾತ್ (19) ವಿರುದ್ದ ಪ್ರಕರಣದ ತನಿಖಾಧಿಕಾರಿಯಾಗಿರುವ ಪುತ್ತೂರು ಉಪ ವಿಭಾಗದ ಡಿವೈಎಸ್‌ಪಿ ದಿನಕರ ಶೆಟ್ಟಿ ಅವರು ಪುತ್ತೂರಿನ ನ್ಯಾಯಾಲಯಕ್ಕೆ 365 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ಆರೋಪಿ ವಿದ್ಯಾರ್ಥಿಗಳು ಸಂತ್ರಸ್ತೆಯನ್ನು ಮನೆಗೆ ತಲುಪಿಸುವುದಾಗಿ ಹೇಳಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ಕಾರಿನಲ್ಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಮೊಬೈಲ್‌ನಲ್ಲಿ ಘಟನೆಯ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದರು. ಅತ್ಯಾಚಾರ ನಡೆದಿರುವ ಕುರಿತು ಬಾಯಿ ಬಿಟ್ಟರೆ ಜೀವಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಒಡ್ಡಿದ್ದರು’ ಎಂಬ ವಿಷಯ ಆರೋಪಪಟ್ಟಿಯಲ್ಲಿದೆ.
ಈಗ ಮೊದಲ ಹಂತದ ಆರೋಪಪಟ್ಟಿ ಸಲ್ಲಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮತ್ತು ದೂರವಾಣಿ ಕರೆಗಳಿಗೆ ಸಂಬಂಧಿಸಿದ ಮಾಹಿತಿ ಕೈಸೇರಬೇಕಿದೆ. ಆ ಬಳಿಕ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲಾಗುವುದು. ಈಗ ಸಲ್ಲಿಸಿರುವ ಆರೋಪಪಟ್ಟಿ ಪ್ರಕಾರ ಆರೋಪಿಗಳಿಗೆ ಶಿಕ್ಷೆಯಾದರೆ 20 ವರ್ಷಗಳವರೆಗೂ ಕಠಿಣ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ’ ಎಂದು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.