DAKSHINA KANNADA
ವೈದ್ಯರ ಮೇಲೆ ಹಲ್ಲೆ ಯತ್ನ ಪ್ರಕರಣ ಪೋಲೀಸ್ ಠಾಣೆಯಲ್ಲಿ ಮುಗಿದ ಪ್ರಕರಣವನ್ನು ಮತ್ತೆ ಎಬ್ಬಿಸಿ ಶಾಂತಿ ಕದಡುವ ಪ್ರಯತ್ನ ಮಾಡಲಾಗಿದೆ

ಪುತ್ತೂರು ಎಪ್ರಿಲ್ 26: ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳ ಮೇಲೆ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸ್ ಠಾಣೆಯಲ್ಲಿ ಮುಗಿದ ಪ್ರಕರಣವನ್ನು ಮತ್ತೆ ಎಬ್ಬಿಸಿ ಶಾಂತಿ ಕದಡುವ ಪ್ರಯತ್ನ ಮಾಡಲಾಗಿದೆ ಎಂದು ಮುಸ್ಲಿಂ ಯುವಜನ ಪರಿಷತ್ ಮುಖಂಡ ಅಶ್ರಫ್ ಕಲ್ಲೇಗ ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ, ಬಳಿಕ ಪೋಲೀಸ್ ಠಾಣೆಯಲ್ಲಿ ಆರೋಪಿಗಳನ್ನು ಕರೆಸಿ, ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಲಾಗಿದೆ. ಆ ಬಳಿಕ ಆರೋಪಿ ಸ್ಥಾನದಲ್ಲಿದ್ದವರನ್ನು ಪೋಲೀಸರು ಬಿಟ್ಟು ಕಳುಹಿಸಿದ್ದಾರೆ. ಆ ಬಳಿಕ ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಈ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದು, ಇವರ ಜೊತೆಗೆ ಇಂಡಿಯನ್ ಮೆಡಿಕಲ್ ಅಸೊಶಿಯೇಶನ್ ಕೂಡಾ ಸೇರಿಕೊಂಡಿದೆ. ಪೋಲೀಸ್ ಠಾಣೆಗೆ ತೆರಳಿ ಅರುಣ್ ಕುಮಾರ್ ಪುತ್ತಿಲ ಆರೋಪಿಗಳನ್ನು ಬಂಧಿಸುವಂತೆ ದಮ್ಕಿ ಹಾಕಿದ್ದು, ಇಲ್ಲದೇ ಹೋದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಮರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ, ಮುಸ್ಲಿಮರಿಗೂ, ನಿನ್ನೆ ನಡೆದ ಘಟನೆಗೂ ಸಂಬಂಧವಿಲ್ಲ. ನಿನ್ನೆಯ ಘಟನೆ ವೈಯುಕ್ತಿಕ ಕಾರಣಕ್ಕಾಗಿ ನಡೆದಿರುವ ಘಟನೆ, ಅರುಣ್ ಕುಮಾರ್ ಪುತ್ತಿಲ ತನ್ನ ಅಸ್ತಿತ್ವಕ್ಕಾಗಿ ಈ ಘಟನೆಯನ್ನು ದೊಡ್ಡದು ಮಾಡುತ್ತಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಓರ್ವ ರೌಡಿಶೀಟರ್, ಆತನನ್ನು ಪೋಲೀಸ್ ಠಾಣೆಯಲ್ಲಿ ಕುಳಿತುಕೊಳ್ಳಲು ಬಿಟ್ಟಿರೋದೇ ಪೋಲೀಸರ ತಪ್ಪು ಎಂದರು. ಪ್ರತಿಭಟನೆ ನೆಪದಲ್ಲಿ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಲಾಗಿದೆ, ರಸ್ತೆ ತಡೆ ನಡೆಸಿದವರ ವಿರುದ್ಧ ಪೋಲೀಸರು ಕೇಸು ದಾಖಲಿಸಬೇಕು ಎಂದು ಅಶ್ರಫ್ ಕಲ್ಲೇಗ ಒತ್ತಾಯಿಸಿದ್ದಾರೆ.