DAKSHINA KANNADA
ಪುತ್ತೂರು ಪಕ್ಷಾಂತರ ಪರ್ವದಲ್ಲಿ ಕಾಂಗ್ರೇಸ್ ಬಾವುಟ ಹಿಡಿದ ಬಿಜೆಪಿ ನಾಯಕಿ – ಪೋಟೋ ವೈರಲ್ ಬೆನ್ನಲ್ಲೆ ಸ್ಪಷ್ಟನೆ

ಪುತ್ತೂರು ಜುಲೈ 10: ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗೆ ಚುನಾವಣೆಗೆ ಸಿದ್ಧತೆ ಆರಂಭಗೊಳ್ಳುವ ನಿರೀಕ್ಷೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಕಾರ್ಯವನ್ನು ಆರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಬಿಜೆಪಿಯ ಶಕ್ತಿಕೇಂದ್ರ ಎಂದು ಗುರುತಿಸಿಕೊಂಡಿರುವ ಪುತ್ತೂರಿನಲ್ಲೂ ರಾಜಕೀಯ ಚಟುವಟಿಕೆಗಳಿಗೆ ಚಾಲನೆ ದೊರೆತಿದೆ. ಈ ಚಟುವಟಿಕೆಗಳ ಪ್ರಮುಖ ಹೈಲೈಟೇ ಪಕ್ಷಾಂತರ. ಇದೇ ರೀತಿ ನಡೆದ ಪಕ್ಷಾಂತರ ಕಾರ್ಯಕ್ರಮವೊಂದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಬೆಳವಣಿಗೆಗೆ ಪೂರಕವಾಗಿ ಬೇರೆ ಬೇರೆ ಪಕ್ಷಗಳಿಂದ ತಮ್ಮ ಪಕ್ಷಕ್ಕೆ ಕಾರ್ಯಕರ್ತರನ್ನು, ಮುಖಂಡರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ತನ್ನ ವಿಧಾನಸಭಾ ಕ್ಷೇತ್ರದ ಪ್ರತೀ ಬೂತ್ ನಿಂದ ಸಾಧ್ಯವಾದಷ್ಟು ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಯೋಜನೆಯನ್ನೂ ಹಾಕಿಕೊಂಡಿದ್ದಾರೆ. ಇದೇ ಪ್ರಕ್ರಿಯೆಯ ಹಿನ್ನಲೆಯಲ್ಲಿ ನಡೆದ ಪಕ್ಷಾಂತರ ಕಾರ್ಯಕ್ರಮವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಪುತ್ತೂರು ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದ ರೇಖಾ ನಾಗರಾಜ್ ಎನ್ನುವವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಇದಕ್ಕೆ ಪೂರಕವೆಂಬತೆ ಕಾರ್ಯಕರ್ತರ ಜೊತೆಗೆ ಅವರು ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕಾಂಗ್ರೆಸ್ ಮುಖಂಡರೋರ್ವರ ಮನೆಯಲ್ಲಿ ನಡೆಯುತ್ತಿದ್ದ ಪಕ್ಷದ ಸಭೆಗೆ ರೇಖಾ ನಾಗರಾಜ್ ಬಂದು ಹಲವರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಕಾಂಗ್ರೆಸ್ ಮಾಹಿತಿ ಹಂಚಿಕೊಂಡಿದೆ.

ಬಿಜೆಪಿ ಮುಖಂಡೆಯ ಕಾಂಗ್ರೆಸ್ ಸೇರ್ಪಡೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಹರಿದಾಡಿದ ಕಾರಣ, ಇದೀಗ ಅವರೇ ಮಾಧ್ಯಮಗಳ ಮುಂದೆ ಬಂದು ಕಾಂಗ್ರೆಸ್ ಸೇರ್ಪಡೆಯ ಘಟನೆಯನ್ನು ನಿರಾಕರಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರೇಖಾ ನಾಗರಾಜ್ ತಮ್ಮ ವೈಯುಕ್ತಿಕ ಕೆಲಸವೊಂದಕ್ಕೆ ಕಾಂಗ್ರೆಸ್ ಕಾರ್ಯಕರ್ತರೋರ್ವರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿತ್ತು. ಆ ಕಾರಣಕ್ಕೆ ಅಲ್ಲೇ ನಿಂತು ಸಭೆ ಮುಕ್ತಾಯವಾದ ಬಳಿಕ ಕಾಂಗ್ರೇಸ್ ನಾಯಕರೊಬ್ಬರನ್ನು ಮಾತನಾಡಿಸಲು ಹೋದ ಸಂದರ್ಭದಲ್ಲಿ ನಮ್ಮ ಕೈಗೆ ಕಾಂಗ್ರೆಸ್ ಧ್ವಜವನ್ನು ಕೊಟ್ಟು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಾನಹಾನಿ ಮಾಡಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದ್ದು, ಶಾಸಕರು ಈ ಮೂಲಕ ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದು, ಬಿಜೆಪಿಯ ನೈಜ ಕಾರ್ಯಕರ್ತ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರೋದಿಲ್ಲ ಎನ್ನುವುದು ಬಿಜೆಪಿ ವಾದವಾಗಿದೆ.
ಬಿಜೆಪಿಯಿಂದ ಮುಂದಿನ ದಿನಗಳಲ್ಲಿ ಸಾವಿರಕ್ಕೂ ಮಿಕ್ಕಿದ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎನ್ನುವುದನ್ನು ಶಾಸಕರು ಈಗಾಗಲೇ ಸ್ಪಷ್ಟಪಡಿಸಿದ್ದು, ಈ ಬೆಳವಣಿಗೆಯ ನಡುವೆ ಇಂಥ ವಿವಾದಗಳೂ ಏಳುವ ಸಾಧ್ಯತೆಗಳೂ ಹೆಚ್ಚಾಗಿದೆ.