DAKSHINA KANNADA
ಪುತ್ತೂರು ನಗರಸಭಾ ಅಧ್ಯಕ್ಷೆ ವಿರುದ್ದ ಅವಹೇಳನಕಾರಿ ಪೋಸ್ಟ್ – ದೂರು ದಾಖಲಿಸಲು ಹಿಂದೇಟು ಹಾಕಿದ ಪೊಲೀಸ್ ಇಲಾಖೆ ವಿರುದ್ದ ಪ್ರತಿಭಟನೆ
ಪುತ್ತೂರು ಡಿಸೆಂಬರ್ 01: ಪುತ್ತೂರು ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕುರಿತಂತೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಅದ್ದು ಪಡೀಲ್ ಎಂಬಾತ ಪುತ್ತೂರು ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆದು ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನಲೆ ಪುತ್ತೂರು ಮಹಿಳಾ ಠಾಣೆ ಹಾಗೂ ಪುತ್ತೂರು ನಗರ ಠಾಣೆಗೆ ದೂರು ನೀಡಲು ಹೋದ ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ್ ಅವರನ್ನ ಪೊಲೀಸರು ಒಂದು ಗಂಟೆಗಳ ಕಾಲ ಠಾಣೆಯಲ್ಲೇ ಕುಳ್ಳಿರಿಸಿ ಸತಾಯಿಸಿ ಮನವಿಯನ್ನ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಏಕಾಏಕಿ ಪುತ್ತೂರು ನಗರ ಠಾಣಾ ಮುಂಭಾಗ ಪ್ರತಿಭಟನೆ ಮಾಡಿದರು. ಈ ವೇಳೆ ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಓರ್ವ ದಲಿತ ವರ್ಗಕ್ಕೆ ಸೇರಿದ ಮಹಿಳೆಯ ಬಗ್ಗೆ ಅದ್ದು ಪಡೀಲ್ ಎಂಬಾತ ಅವಹೇಳನಕಾರಿಯಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾನೆ. ಇದರ ಬಗ್ಗೆ ಪೊಲೀಸರಿಗೆ ಮಹಿಳೆ ದೂರು ನೀಡಲು ಬಂದ್ರೆ ಅವರನ್ನ ಸತಾಯಿಸುತ್ತೀರ’ ಇದೆಷ್ಟು ಸರಿ ಎಂದು ಸಂಜೀವ ಮಠಂದೂರು ಪ್ರಶ್ನೆ ಹಾಕಿದರು. ಈ ಕೂಡಲೇ ಅದ್ದು ಪಡೀಲ್ ವಿರುದ್ಧ ದೂರು ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ದೂರು ದಾಖಲು ಮಾಡದಿದ್ದಲ್ಲಿ ಪೊಲೀಸ್ ಠಾಣೆಯಿಂದ ಹೋಗಲ್ಲ. ಎಲ್ಲರೂ ಇಲ್ಲೇ ಕೂತು ಪ್ರತಿಭಟಿಸುತ್ತೇವೆ ಎಂದು ಪಟ್ಟು ಹಿಡಿದ್ರು. ಬಳಿಕ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಮಹಿಳೆ ಬಗ್ಗೆ ಅವಹೇಳಕಾರಿಯಾಗಿ ಬರೆದ ಅದ್ದು ಪಡೀಲ್ ವಿರುದ್ಧ ದೂರು ದಾಖಲು ಮಾಡಿದರು.