DAKSHINA KANNADA
ಪುತ್ತೂರು ಬಿಜೆಪಿಗೆ ನೂತನ ಸಾರಥಿಗಳು – ಸಾಮಾನ್ಯ ಕಾರ್ಯಕರ್ತನಾಗಿ ಉಳಿದ ಅರುಣ್ ಕುಮಾರ್ ಪುತ್ತಿಲ

ಪುತ್ತೂರು ಅಗಸ್ಟ್ 15: ಭಾರೀ ಕುತೂಹಲ ಉಳಿಸಿಕೊಂಡಿದ್ದ ಪುತ್ತೂರು ನಗರ ಮಂಡಲ ಮತ್ತು ಗ್ರಾಮಾಂತರ ಮಂಡಲಗಳಿಗೆ ನೂತನ ಅಧ್ಯಕ್ಷರ ಹಾಗೂ ಪ್ರಧಾನ ಕಾರ್ಯದರ್ಶಿಗಳ ಆಯ್ಕೆ ಮಾಡಲಾಗಿದೆ. ಬಂಡಾಯದ ಮೂಲಕ ಬಿಜೆಪಿಗೆ ಬಿಸಿ ಮುಟ್ಟಿಸಿದ್ದ ಅರುಣ್ ಕುಮಾರ್ ಪುತ್ತಿಲಗೆ ಯಾವುದೇ ಸ್ಥಾನಮಾನ ನೀಡದೇ ಸಾಮಾನ್ಯ ಕಾರ್ಯಕರ್ತನಾಗಿಯೇ ಬಿಜೆಪಿ ಉಳಿಸಿಕೊಂಡಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ನೂತನ ಪದಾಧಿಕಾರಿಗಳ ಆಯ್ಕೆ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಪ್ರಸನ್ನಕುಮಾರ್ ಮಾರ್ತ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಪ್ರಸನ್ನಕುಮಾರ್ ಮಾರ್ತ ಅವರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷರಾಗಿದ್ದರು.

ಪುತ್ತೂರು ನಗರ ಮಂಡಲ ಅಧ್ಯಕ್ಷರಾಗಿ ಶಿವಕುಮಾರ್ ಪಿ.ಬಿ ಕಲ್ಲಿಮಾರ್ ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ನಾಗೇಶ್ ಪ್ರಭು ಮತ್ತು ಅನಿಲ್ ತೆಂಕಿಲ ಅವರನ್ನು ಆಯ್ಕೆ ಮಾಡಲಾಗಿದೆ.ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ವಿಟ್ಲ ಶಕ್ತಿಕೇಂದ್ರ ವ್ಯಾಪ್ತಿಯ ದಯಾನಂದ ಶೆಟ್ಟಿ ಉಜಿರೆಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಉಮೇಶ್ ಗೌಡ ಕೋಡಿಯಡ್ಕ ಮತ್ತು ಪ್ರಶಾಂತ್ ನೆಕ್ಕಿಲಾಜೆ ಅವರನ್ನು ನೇಮಕ ಮಾಡಲಾಗಿದೆ. ಈ ಪೈಕಿ ಅನಿಲ್ ತೆಂಕಿಲ ಮತ್ತು ಉಮೇಶ್ ಗೌಡ ಕೋಡಿಯಡ್ಕ ಅವರು ಈ ಹಿಂದೆ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು.
ಬಿಜೆಪಿಗೆ ಬಂಡಾಯದ ಬಿಸಿ ತೋರಿಸಿದ್ದ ಅರುಣ್ ಕುಮಾರ್ ಪುತ್ತಿಲ , ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಯಾಗಿದ್ದರು. ಯಾವುದೇ ಹುದ್ದೆ ಆಕಾಂಕ್ಷಿ ಅಲ್ಲ ಎಂದು ಹೇಳಿದ್ದರೂ ಪುತ್ತೂರು ಮಂಡಲ ಅಧ್ಯಕ್ಷಗಿರಿಗೆ ಕಣ್ಣು ಹಾಕಿದ್ದರೂ ಆದರೆ ಇದೀಗ ಬಿಜೆಪಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಯಾವುದೇ ಸ್ಥಾನಮಾನ ನೀಡದೇ ಸಾಮಾನ್ಯ ಕಾರ್ಯಕರ್ತರನಾಗಿಯೇ ಉಳಿಸಿಕೊಂಡಿದೆ.