DAKSHINA KANNADA
ಪುತ್ತೂರು – ಬೈಕ್ ಮತ್ತು ಕೆಎಸ್ಆರ್ ಟಿಸಿ ಬಸ್ ನಡುವೆ ಅಪಘಾತ – ತಂದೆ ಮಗ ಸಾವು

ಪುತ್ತೂರು ಮೇ 11:ಬೈಕ್ ಮತ್ತು ಕೆಎಸ್ಆರ್ ಟಿಸಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿ ಸಹಸವಾರ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಕುವೆತ್ತಿಲ ಎಂಬಲ್ಲಿ ರವಿವಾರ ನಡೆದಿದೆ.
ಬಂಟ್ವಾಳ ತಾಲ್ಲೂಕಿನ ನರಿಕೊಂಬು ಸಮೀಪದ ನಾಯಿಲ ಬೋರುಗುಡ್ಡೆ ನಿವಾಸಿ, ನರಿಕೊಂಬು ಗ್ರಾಪಂ ಸದಸ್ಯ, ಸಮಾಜ ಸೇವಾ ಬ್ಯಾಂಕ್ ನಿರ್ದೇಶಕ ಅರುಣ್ ಕುಲಾಲ್ (45), ಅವರ ಪುತ್ರ, ಪ್ರಥಮ ಪಿಯುಸಿಗೆ ದಾಖಲಾಗಿದ್ದ ಧ್ಯಾನ್ (15) ಮೃತಪಟ್ಟವರು. ಸುಳ್ಯದಲ್ಲಿ ನಡೆಯಲಿದ್ದ ಸಂಬಂಧಿಕರೊಬ್ಬರ ವಿವಾಹ ಸಮಾರಂಭಕ್ಕೆ ತೆರಳುವಾಗ ಅವಘಡ ನಡೆದಿದೆ.

ಅರುಣ್ ಕುಲಾಲ್ ಅವರು ಮಾಣಿ ಕಡೆಯಿಂದ ಸುಳ್ಯಕಡೆಗೆ ಚಲಾಯಿಸುತ್ತಿದ್ದ ಬೈಕ್‌ಗೆ ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಅರುಣ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಧ್ಯಾನ್ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟರು. ಪುತ್ತೂರು ಸಂಚಾರ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.