DAKSHINA KANNADA
ಪುತ್ತೂರು ಬ್ಯಾನರ್ ವಿವಾದಕ್ಕೆ ಯುವಕರ ಮೇಲೆ ಪೊಲೀಸರ ದೌರ್ಜನ್ಯ – ಬಿ ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ
ಪುತ್ತೂರು ಜನವರಿ 15: ಬಿಜೆಪಿ ಮುಖಂಡರಾದ ನಳಿನ್ ಕುಮಾರ್ ಕಟೀಲ್ ಮತ್ತು ಡಿ.ವಿ.ಸದಾನಂದ ಗೌಡ ವಿರುದ್ಧ ಅವಹೇಳನಕಾರಿ ಬ್ಯಾನರ್ ಹಾಕಿದ್ದ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಯುವಕರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಕುರಿತಂತೆ ತನಿಖಾಧಿಕಾರಿ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಪುತ್ತೂರು 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.
ಆರೋಪಿ ಸ್ಥಾನದಲ್ಲಿರುವ ಅಂದಿನ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ,ಪುತ್ತೂರು ಗ್ರಾಮಾಂತರ ಠಾಣೆಯ ಎಸ್.ಐ ಶ್ರೀನಾಥ್, ಕಾನ್ ಸ್ಟೇಬಲ್ ಹರ್ಷಿತ್ ಎಂಬವರು ವಿರುದ್ಧ ನ್ಯಾಯಾಲಯಕ್ಕೆ ಮಾರ್ಚ್ 10 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.
ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಯುವಕರು ಪುತ್ತೂರಿನಲ್ಲಿ ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಅವರ ಭಾವಚಿತ್ರದ ಪ್ಲೇಕ್ಸ್ ಹಾಕಿ ಅದಕ್ಕೆ ಚಪ್ಪಲಿ ಹಾರ ಹಾಕಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಅವಿನಾಶ್ ಸೇರಿದಂತೆ ಹಲವು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಯುವಕರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು, ಯುವಕರ ಮೈಮೇಲೆ ಹಲ್ಲೆಯ ಗುರುತಿನ ಪೋಟೋಗಳು ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಪುರುಷರಕಟ್ಟೆಯ ಅವಿನಾಶ್ ಮತ್ತು ಇತರರು ಚಿಕಿತ್ಸೆಗಾಗಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರ ವಿರುದ್ಧ ದೂರು ನೀಡಿದ್ದು, ಎಫ್ ಐ ಆರ್ ದಾಖಲಾಗಿತ್ತು. ಬಳಿಕ ನಡೆದ ಬೆಳವಣಿಗೆಯಲ್ಲಿ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ಘಟನೆಯ ತನಿಖೆಗಾಗಿ ನೇಮಿಸಲಾಗಿತ್ತು.
ತನಿಖೆ ನಡೆಸಿದ ಅವರು “ಈ ದೂರು ಸುಳ್ಳಾಗಿದ್ದು ತನಿಖೆ ನಡೆಸಲು ತಕ್ಕುದಲ್ಲ, ಕಾನೂನಿನ ತಪ್ಪು ತಿಳುವಳಿಕೆಯೆಂದು, ಕ್ರಮ ಜರಗಿಸತಕ್ಕುದಲ್ಲವೆಂದು ತನಿಖೆ ವೇಳೆ ತಿಳಿದುಬಂದಿರುವುದಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ವರದಿ ಸ್ವೀಕರಿಸಿರುವ ನ್ಯಾಯಾಲಯ ದೂರುದಾರರಿಗೆ ವರದಿಯೊಂದಿಗೆ ನೋಟೀಸ್ ಜಾರಿ ಮಾಡಿದ್ದು ವರದಿಯನ್ನು ತಿರಸ್ಕರಿಸುವುದಿದ್ದರೆ ನೋಟೀಸ್ ತಲುಪಿದ ಒಂದು ವಾರದೊಳಗಾಗಿ ಸಂಬಂಧಿತ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ವಿರೋಧಿಸಬಹುದು ತಿಳಿಸಿದ್ದು.
ಈ ವರದಿಗೆ ಸಂಬಂಧಿಸಿ ದೂರುದಾರ ಅವಿನಾಶ್ ಮತ್ತು ಇತರರ ಪರವಾಗಿ ವಕೀಲರಾದ ಉದಯಶಂಕರ್, ಚಿನ್ಮಯ್ ರೈ, ಶಿವಾನಂದ ವಿಟ್ಲ ಅವರು ನ್ಯಾಯಾಲಯಕ್ಕೆ ಅಕ್ಷೇಪ ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬಿ ರಿಪೋರ್ಟ್ ವರದಿಯನ್ನು ತಿರಸ್ಕರಿಸಿದೆ. ಜೊತೆಗೆ ಆಗ ಕರ್ತವ್ಯದಲ್ಲಿದ್ದ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಪುತ್ತೂರು ಗ್ರಾಮಾಂತರ ಠಾಣೆಯ ಆಗಿನ ಎಸ್‌ಐ ಶ್ರೀನಾಥ್ ರೆಡ್ಡಿ ಹಾಗೂ ಕಾನ್‌ಸ್ಟೇಬಲ್ ಹರ್ಷಿತ್ ಎಂಬವರ ವಿರುದ್ದ ಮಾ.10 ಕ್ಕೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲು ಆದೇಶಿಸಿದೆ.