DAKSHINA KANNADA
ಪುತ್ತೂರು ವೈದ್ಯಾಧಿಕಾರಿ ಜೊತೆ ಅನುಚಿತ ವರ್ತನೆ – ತಾಯಿ ಮಗನಿಗೆ ನಿರೀಕ್ಷಣಾ ಜಾಮೀನು

ಪುತ್ತೂರು ಮೇ 04: ಪುತ್ತೂರಿನ ಸರಕಾರಿ ಆಸ್ಪತ್ರೆ. ವೈದ್ಯಾಧಿಕಾರಿ ಜೊತೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಲು ಮುಂದಾಗಿದ್ದ ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸುಳ್ಯಪದವಿನ ಜೊಹರಾ ಮತ್ತು ಆಕೆಯ ಪುತ್ರ ಸಮದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮೊದಲು ಆರೋಪಿಗಳನ್ನು ಅರೆಸ್ಟ್ ಮಾಡಿದ್ದ ಪೊಲೀಸರು ಬಳಿಕ ಬಿಡುಗಡೆ ಮಾಡಿದ್ದರು, ಇದು ವೈದ್ಯರ ಆಕ್ರೋಶಕ್ಕೆ ಕಾರಣವಾಗಿದ್ದು, ರಾತ್ರಿ ಮತ್ತು ಹಗಲು ಪ್ರತಿಭಟನೆ ನಡೆದಿತ್ತು. ಅಲ್ಲದೆ ಆರೋಪಿಗಳನ್ನು ಅರೆಸ್ಟ್ ಮಾಡುವಂತೆ ವೈದ್ಯರು ಪಟ್ಟು ಹಿಡಿದಿದ್ದರು. ಆದರೆ ಆರೋಪಿಯ ಬಂಧನವಾಗದ ಕಾರಣ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆದಿತ್ತು. ವಿವಿಧ ವೈದ್ಯಕೀಯ ಸಂಘಟನೆಗಳ ಪದಾಧಿಕಾರಿಗಳು, ವೈದ್ಯರು, ಹಿಂದೂ ಸಂಘಟನೆಗಳ ಪ್ರಮುಖರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದರು.

ಆ ವೇಳೆ ಶಾಸಕರು ಅಂದು ಸಂಜೆಯೊಳಗಾಗಿ ಆರೋಪಿಯ ಬಂಧನಕ್ಕೆ ಪೊಲೀಸರು ಕ್ರಮಕೈಗೊಳ್ಳುತ್ತಾರೆ ಎಂದು ಭರವಸೆ ನೀಡಿದ್ದರು. ಆ ಗಡುವಿನ ಅವಧಿ ಮುಗಿದಿದ್ದರೂ ಆರೋಪಿಯ ಬಂಧನವಾಗಿರಲಿಲ್ಲ. ಬಳಿಕ ಎಸ್‌ಪಿ ನೀಡಿದ ಭರವಸೆಯಂತೆ ಪ್ರತಿಭಟನೆಯನ್ನು ಕೈಬಿಡಲಾಗಿತ್ತು. ಆದರೆ, ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮುಂದುವರಿಸಿದ್ದರು.
ಆರೋಪಿಗಳ ಪರವಾಗಿ ವಕೀಲರಾದ ಅಶ್ರಫ್ ಅಗ್ನಾಡಿ, ಅಬ್ದುಲ್ ಮಜೀದ್ ಖಾನ್, ಸೆಲೀನಾ ನೆಕ್ಕಿಲಾಡಿ, ಮಿಶ್ರಿಯಾ ವಾದಿಸಿದ್ದರು.