DAKSHINA KANNADA
ಪುತ್ತೂರು : ಗುಡ್ಡಕ್ಕೆ ಕರೆದೊಯ್ದು ಮಹಿಳೆಯರಿಬ್ಬರ ಹತ್ಯೆಗೆ ಯತ್ನ- ಆರೋಪಿ ಬಂಧನ..!

ವ್ಯಕ್ತಿಯೊಬ್ಬ ಗುಡ್ಡಕ್ಕೆ ಕರೆದೊಯ್ದು ಮಹಿಳೆಯರಿಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಪುತ್ತೂರು ತಾಲೂಕಿನ ನಡೆದಿದ್ದು ಆರೋಪಿ ಸುರೇಶ್ ಎಂಬತನನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು : ವ್ಯಕ್ತಿಯೊಬ್ಬ ಗುಡ್ಡಕ್ಕೆ ಕರೆದೊಯ್ದು ಮಹಿಳೆಯರಿಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಪುತ್ತೂರು ತಾಲೂಕಿನ ನಡೆದಿದ್ದು ಆರೋಪಿ ಸುರೇಶ್ ಎಂಬತನನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಸಮೀಪ ಮಂಗಳವಾರ ನಡೆದಿದೆ.
ಮಹಿಳೆಯರಿಬ್ಬರನ್ನು ಉಪಾಯದಿಂದ ಗುಡ್ಡಕ್ಕೆ ಕರೆದುಕೊಂಡು ಹೋದ ಆರೋಪಿ ಸುರೇಶ್ ಬಳಿಕ ಕತ್ತು ಬಿಗಿದು ಹತ್ಯೆಗೆ ಯತ್ನಿಸಿದ್ದಾನೆ.
ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಮೂಲೆಗದ್ದೆ ಬಾಣಪದವಿನ ಶಿಕ್ಷಕ ದಿವಂಗತ ವಾಸು ನಾಯ್ಕ ಅವರ ಪತ್ನಿ ಸುರೇಖಾ (54) ಮತ್ತು ಗೋಳಿತ್ತೊಟ್ಟುವಿನ ಗಿರಿಜಾ (52) ಹಲ್ಲೆಗೊಳಗಾದ ಮಹಿಳೆಯರಾಗಿದ್ದಾರೆ.
ಗೋಳಿತ್ತೊಟ್ಟುವಿನ ಗಿರಿಜಾ ಅವರು ಸುರೇಖಾ ಅವರ ಮನೆಯಲ್ಲಿದ್ದುಕೊಂಡು ಕೂಲಿ ಕೆಲಸ ಮಾಡುತ್ತಿದ್ದರು.
ಸುರೇಖಾ ಮನೆಗೆ ಆರೋಪಿ ಸುರೇಶ್ ಬಂದಿದ್ದ. ಬಳಿಕ ಸುರೇಶ್ ಸಮೀಪದ ಗುಡ್ಡದಲ್ಲಿ ಅಣಬೆಗಳು ಮೂಡಿವೆ ಎಂದು ನಂಬಿಸಿ, ಅಣಬೆಗಳನ್ನು ಕೀಳಲು ಗಿರಿಜಾ ಅವರನ್ನು ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.
ಅಲ್ಲಿ ಮಹಿಳೆಯ ಕುತ್ತಿಗೆಗೆ ಬೈರಾಸಿನಿಂದ ಬಿಗಿದಿದ್ದ, ನೆಲಕ್ಕೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಅಲ್ಲೇ ಬಿಟ್ಟು ಮನೆಗೆ ಮರಳಿದ್ದ. ಬಳಿಕ ಸುರೇಖಾ ಬಳಿ, ‘ಗಿರಿಜಾ ಅವರು ಅಸ್ವಸ್ಥಗೊಂಡು ಗುಡ್ಡೆಯಲ್ಲಿ ಬಿದ್ದಿದ್ದಾರೆ.
ನೀರು ತೆಗೆದುಕೊಂಡು ಬನ್ನಿ’ ಎಂದು ಹೇಳಿದ್ದಾನೆ. ಅದನ್ನು ನಂಬಿ ಸುರೇಖಾ ಆತನ ಜೊತೆ ಗುಡ್ಡಕ್ಕೆ ಧಾವಿಸಿದ್ದರು.
ಆಗ ಆಕೆಯ ಕುತ್ತಿಗೆಗೂ ಬೈರಾಸಿನಿಂದ ಬಿಗಿದು ಕೊಲೆಗೆ ಯತ್ನಿಸಿದ್ದಾನೆ.
ಮಹಿಳೆಯರ ಬೊಬ್ಬೆ ಕೇಳಿ ಅಕ್ಕ ಪಕ್ಕದ ಪಕ್ಕದವರು ಸ್ಥಳಕ್ಕೆ ಧಾವಿಸಿ ಬಂದು ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯರಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ,
ಆರೋಪಿ ಸುರೇಶ್ ಸ್ಥಳದಿಂದ ಪರಾರಿಯಾಗಿದ್ದು ಬಳಿಕ ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸುರೇಶ್ ಸುರೇಖಾರ ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಲು ಈ ಕೃತ್ಯ ಎಸಗಿದ್ದಾನೆ ಎಂದು ರವಿಚಂದ್ರ ಎಂಬವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಸಂಪ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.