Connect with us

DAKSHINA KANNADA

ಪ್ರತಿದಿನ ಆಕ್ಸಿಡೆಂಟ್ ನಡೆಯುವ ಪುತ್ತೂರಿನ ಅಪಾಯಕಾರಿ ಜಂಕ್ಷನ್…..!!

ಪುತ್ತೂರು : ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ಪತ್ರಾವೋ ಜಂಕ್ಷನ್ ಇದೀಗ ಅಪಾಯದ ಕೇಂದ್ರ ಬಿಂದುವಾಗಿ ಬದಲಾಗಿದೆ. ಪ್ರತೀ ದಿನವೂ ಇಲ್ಲಿ ಒಂದಲ್ಲ ಒಂದು ಅಫಘಾತ ಸಂಭವಿಸುತ್ತಿದ್ದು, ಹತ್ತಾರು ಜೀವಗಳು ಅಫಘಾತಗಳಿಗೆ ಬಲಿಯಾಗಿವೆ. ಈ ಸ್ಥಳದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ವೃತ್ತದಿಂದಾಗಿ ಪುತ್ತೂರು ಪೇಟೆಯಿಂದ ಬರುವ ವಾಹನಗಳು ಹಾಗೂ ರಾಜ್ಯ ಹೆದ್ದಾರಿಯಲ್ಲಿ ಹಾದುಹೋಗುವ ವಾಹನಗಳಲ್ಲಿ ಉಂಟಾಗುತ್ತಿರುವ ಗೊಂದಲವೇ ಈ ಜಂಕ್ಷನ್ ಮರಣಕೂಪವಾಗಲು ಕಾರಣವಾಗುತ್ತಿದೆ.

ಮಾಣಿ-ಮೈಸೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಬರುವ ಪುತ್ತೂರು ನಗರದ ಪತ್ರಾವೋ ವೃತ್ತ ಇದೀಗ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯಕಾರಿ ಸ್ಥಳವಾಗಿ ರೂಪುಗೊಂಡಿದೆ. ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ನಡೆದ ಬಳಿಕ ಪುತ್ತೂರು ನಗರದ ಮೂಲಕ ಮೈಸೂರು ಹಾದುಹೋಗುವ ವಾಹನಗಳು ಇದೀಗ ಬೈಪಾಸ್ ರಸ್ತೆಯ ಮೂಲಕ ನೇರವಾಗಿ ತೆರಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬೈಪಾಸ್ ರಸ್ತೆಯು ಪತ್ರಾವೋ ಸರ್ಕಲ್ ಬಳಿ ಪುತ್ತೂರು ನಗರದೊಳಗೆ ಬರುವ ರಸ್ತೆಯನ್ನು ಸೇರುತ್ತದೆ.

ರಸ್ತೆ ಅಗಲೀಕರಣಗೊಂಡರೂ, ಹಿಂದೆ ಇದ್ದ ವೃತ್ತವೇ ಈಗಲೂ ಇರುವ ಕಾರಣ ಅತ್ಯಂತ ಅಗಲವಾದ ರಸ್ತೆಗೆ ಅತೀ ಕಿರಿದಾಗಿರುವ ಈ ವೃತ್ತ ಯಾವುದೇ ರೀತಿಯ ಪರಿಣಾಮ ಬೀರದ ಕಾರಣ ಪ್ರತಿನಿತ್ಯವೂ ಇಲ್ಲಿ ಒಂದಲ್ಲ ಒಂದು ಅವಘಡಗಳು ಸಂಭವಿಸುತ್ತಿದೆ. ಪುತ್ತೂರು ಪೇಟೆ ಕಡೆಯಿಂದ ಬರುವ ವಾಹನಗಳು ಹಾಗೂ ರಾಜ್ಯ ಹೆದ್ದಾರಿಯಲ್ಲಿ ಹಾದುಹೋಗುವ ವಾಹನಗಳು ಸರಿಯಾದ ಮಾರ್ಗಸೂಚಿ ಇಲ್ಲದ ಕಾರಣ ಗೊಂದಲಕ್ಕಿ ಸಿಲುಕಿ ಈ ಜಂಕ್ಷನ್ ಇದೀಗ ಮರಣಕೂಪವಾಗಿ ಬದಲಾಗಲಾರಂಭಿಸಿದೆ. ಅಲ್ಲದೆ ಪಾದಾಚಾರಿಗಳಿಗೂ ಯಾವ ಕಡೆಯಿಂದ ವಾಹನಗಳು ಬರುತ್ತಿವೆ ಎನ್ನುವ ಲೆಕ್ಕಾಚಾರವೂ ಸಿಗದ ಕಾರಣ ಹೆಚ್ಚಿನ ಸಂಖ್ಯೆಯ ಪಾದಾಚಾರಿಗಳೂ ಈ ಸರ್ಕಲ್ ನಲ್ಲಿ ನಡೆಯುವ ಅಫಘಾತಕ್ಕೆ ಬಲಿಯಾಗುತ್ತಿದ್ದಾರೆ.

ಮಾಣಿ ಹಾಗೂ ಮೈಸೂರು ಕಡೆಯಿಂದ ಬರುವ ವಾಹನಗಳು ಕೆಲವು ವಾಹನಗಳು ಬೈಪಾಸ್ ರಸ್ತೆಯ ಮೂಲಕ ನೇರವಾಗಿ ಮಂಗಳೂರು ಹಾದುಹೋದರೆ, ಇನ್ನು ಕೆಲವು ವಾಹನಗಳು ನೇರವಾಗಿ ಪುತ್ತೂರು ಪೇಟೆ ಸಂಪರ್ಕಿಸುವ ರಸ್ತೆಯಲ್ಲಿ ಹಾದುಹೋಗುತ್ತವೆ. ಇದರಿಂದಾಗಿ ಪುತ್ತೂರು ಪೇಟೆಯಿಂದ ಬರುವಂತಹ ವಾಹನಗಳಿಗೆ ಎದುರುಗಡೆಯಿಂದ ಬರುವ ವಾಹನಗಳು ಯಾವ ಕಡೆಗೆ ಬರುತ್ತಿವೆ ಎನ್ನುವ ಲೆಕ್ಕಾಚಾರವು ಸಿಗದ ಕಾರಣವೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಫಘಾತಗಳು ಸಂಭವಿಸಲಾರಂಭಿಸಿದೆ. ರಸ್ತೆ ಸಾಕಷ್ಟು ಅಗಲವಿದ್ದರೂ, ಸರಿಯಾದ ಮಾರ್ಗಸೂಚಿ, ಡಿವೈಡರ್ ಗಳನ್ನು ಸಮರ್ಪಕವಾಗಿ ಅಳವಡಿಸದೇ ಇದ್ದ ಕಾರಣ ಪ್ರತಿನಿತ್ಯ ಈ ಜಂಕ್ಷನ್ ನಲ್ಲಿ ಅಫಘಾತಗಳು ಸಂಭವಿಸುವುದಕ್ಕೆ ಮುಖ್ಯ ಕಾರಣವೂ ಆಗಿದೆ.

ದಿನಂಪ್ರತಿ ಅವಘಡಕ್ಕೆ ಕಾರಣವಾಗುತ್ತಿರುವ ಪತ್ರಾವೋ ಜಂಕ್ಷನ್ ನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ತಕ್ಷಣ ನಡೆಯಬೇಕಿದೆ. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಈ ಜಂಕ್ಷನ್ ಇನ್ನಷ್ಟು ಬಲಿ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *