DAKSHINA KANNADA
ವಿಜಯೇಂದ್ರರನ್ನು ಭೇಟಿಯಾದ ಪುತ್ತಿಲ ಪರಿವಾರ; ಕರಾವಳಿ ರಾಜಕೀಯದಲ್ಲಿ ಸಂಚಲನ..!
ಪುತ್ತೂರು: ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ‘ಪುತ್ತಿಲ ಪರಿವಾರ’ ನಾಯಕರು ಭೇಟಿ ಮಾಡಿ ಅಭಿನಂದಿಸಿದ್ದಾರೆ. ಶಿವಮೊಗ್ಗದ ನಿವಾಸಕ್ಕೆ ತೆರಳಿ ಭೇಟಿ ಮಾಡಿರುವ ಪುತ್ತಿಲ ಪರಿವಾರ ನಾಯಕರ ಬೆಳವಣಿಗೆ ಕರಾವಳಿ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಮುಂದಿನ ಲೋಕಾಸಭಾ ಅಭ್ಯರ್ಥಿ ಅಕಾಂಕ್ಷಿ ಅರುಣ್ ಪುತ್ತಿಲ ಇಲ್ಲದಿದ್ದರೂ ಪುತ್ತಿಲ ಪರಿವಾರದ ಪ್ರಮುಖರು ಭೇಟಿ ಮಾಡಿ ವಿಜಯೇಂದ್ರರಿಗೆ ಪುತ್ತೂರು ಮಹಾಲಿಂಗೇಶ್ವರ ದೇವರ ಬೆಳ್ಳಿಯ ಸ್ಮರಣಿಕೆ ನೀಡಿ ಶುಭಕೋರಿದ್ದಾರೆ. ಇದು ಔಪಚಾರಿಕ ಭೇಟಿ ಎನ್ನಲಾಗುತ್ತಿದ್ದರೂ ಕರಾವಳಿಯಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ನಾಂದಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ . ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಿಡಿದೆದ್ದ’ಪುತ್ತಿಲ ಪರಿವಾರ’ ನಾಯಕರು ಇದೀಗ ವಿಜಯೇಂದ್ರರನ್ನು ಭೇಟಿ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾಡ್ತಾ ನೇತೃತ್ವದ ತಂಡದಲ್ಲಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಮಠ, ಸುಧೀಶ್ ಶೆಟ್ಟಿ ಕಂಪ ಮತ್ತಿತರರಿದ್ದರು. ಪುತ್ತೂರಿನ ವಿದ್ಯಮಾನಗಳ ಬಗ್ಗೆ ನೂತನ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಅರುಣ್ ಪುತ್ತಿಲಗೆ ಬಿಜೆಪಿಯಲ್ಲಿ ಸ್ಥಾನಮಾನಗಳ ಬಗ್ಗೆ ಹೆಚ್ಚು ಚರ್ಚೆ ನಡೆಸದ ವಿಜಯೇಂದ್ರ ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನ ಹರಿಸುವ ಭರವಸೆ ನೀಡಿದ್ದಾರೆನ್ನಲಾಗಿದೆ. ದ.ಕ ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಅರುಣ್ ಪುತ್ತಿಲ ಸಹ ವಿಜಯೇಂದ್ರರನ್ನು ಸದ್ಯದಲ್ಲೇ ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಅರುಣ್ ಪುತ್ತಿಲ ಪುತ್ತೂರು ಟಿಕೆಟ್ ಸಿಗದ ಸಿಟ್ಟಿನಲ್ಲಿ ಬಿಜೆಪಿ ವಿರುದ್ಧ ಸಡ್ಡು ಹೊಡೆದು ಚುನಾವಣೆಗೆ ಸ್ಪರ್ಧಿಸಿದ್ದರು. ಹೈಕಮಾಂಡ್ ಮನವೊಲಿಸುವ ಯತ್ನ ನಡೆಸಿದರೂ ಬಗ್ಗಿರಲಿಲ್ಲ. ಮುಂದಿನ ಲೋಕಸಭಾ ಚುನಾವಣೆಗೆ ಆರುಣ್ ಪುತ್ತಿಲ ದಕ್ಷಿಣ ಕನ್ನಡದಿಂದ ಸ್ಪರ್ಧಿಸುವ ಅಪೇಕ್ಷೆ ಅರುಣ್ ಪುತ್ತಿಲ ಹೊಂದಿದ್ದಾರೆ.