Connect with us

DAKSHINA KANNADA

ಪುತ್ತಿಲ ಪರಿವಾರ ಸೇರ್ಪಡೆ ಮತ್ತಷ್ಟು ಗೊಂದಲ – ಅರುಣ್ ಪುತ್ತಿಲ ಸೇರ್ಪಡೆ ಮಾಧ್ಯಮಗಳ ಸೃಷ್ಠಿ ಎಂದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಪುತ್ತೂರು ಮಾರ್ಚ್ 16: ದಕ್ಷಿಣಕನ್ನಡ ಜಿಲ್ಲೆಯ ಬಿಜೆಪಿಯಲ್ಲಿ ಇನ್ನೂ ಗೊಂದಲಗಳು ಮುಂದುವರೆದಿದ್ದು, ಬಿಜೆಪಿ ವಿರುದ್ದ ಬಂಡಾಯ ಎದ್ದು ಇದೀಗ ಮತ್ತೆ ಬಿಜೆಪಿ ಸೇರ್ಪಡೆಗೆ ಕಾಯುತ್ತಿದ್ದ ಪುತ್ತಿಲ ಪರಿವಾರದ ಅರುಣ್ ಪುತ್ತಿಲ ರಿಗೆ ಮತ್ತೆ ವಿಘ್ನ ಎದುರಾಗಿದೆ. ಇದೀಗ ಪುತ್ತೂರಿನ ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ್ದು, ಶುಕ್ರವಾರ ಮಂಗಳೂರಿನಲ್ಲಿ ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಪಡೆದುಕೊಳ್ಳುವ ಕಾರ್ಯಕ್ರಮ ಕೊನೆಕ್ಷಣದಲ್ಲಿ ನಡೆಯಲೇ ಇಲ್ಲ.


ಬೆಂಗಳೂರಿನಲ್ಲಿ ಗುರುವಾರ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸಮುಖ ಬೇಷರತ್ತಾಗಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಯಾಗುತ್ತಾರೆ ಅಲ್ಲದೆ ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರ ಬಿಜೆಪಿಯಲ್ಲಿ ವಿಲೀನಗೊಂಡಿದ್ದು, ಲೋಕಸಭಾಚುನಾವಣೆಯನ್ನು ಒಟ್ಟಾಗಿ ಎದುರಿಸುವ ಬಗ್ಗೆ ಇಬ್ಬರೂ ಮಾಧ್ಯಮಕ್ಕೆ ತಿಳಿಸಿದ್ದರು.ಹೀಗಾಗಿ ಮರುದಿನ ಮಂಗಳೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಪರಿವಾರ ಅಧಿಕೃತವಾಗಿ ನಡೆಯಬೇಕಿತ್ತು. ಸೇರ್ಪಡೆಗೊಳ್ಳುವ ಪ್ರಕ್ರಿಯೆ ನಡೆಬೇಕಿತ್ತು.
ಆದರೆ ಪುತ್ತೂರಿಗೆ ಬಂದ ಬಳಿಕ ಇದೀಗ ಪರಿಸ್ಥಿತಿ ಸಂಪೂರ್ಣ ಉಲ್ಟಾ ಆಗಿದ್ದು. ಅರುಣ್ ಕುಮಾರ್ ಪುತ್ತಿಲ ಸೇರ್ಪಡೆಗೆ ಸಮ್ಮತಿಸಿದ ಬಗ್ಗೆ ಸ್ಥಳೀಯ ಮುಖಂಡರು ವಿರೋಧ ಎದುರಿಸುವಂತಾಗಿತ್ತು. ಶುಕ್ರವಾರ ಮಂಗಳೂರಿನಲ್ಲಿ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತೂರು ಬಿಜೆಪಿ ಮುಖಂಡರಿಂದಲೇ ವಿರೋಧ ವ್ಯಕ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಸುದ್ದಿಗೋಷ್ಠಿಗೆ ಹಾಜರಾಗದೆ ಸಂಜೆ ನೇರವಾಗಿ ಪುತ್ತೂರಿಗೆ ದೌಡಾಯಿಸಿದ್ದರು. ಪುತ್ತೂರಿನ ಬಿಜೆಪಿ ಕಚೇರಿಯಲ್ಲಿ ಮುಚ್ಚಿದ ಬಾಗಿಲ ಮಾತುಕತೆ ನಡೆಸಬೇಕಾಯಿತು. ಸಂಜೆ 6ರಿಂದ ರಾತ್ರಿ 8 ಗಂಟೆ ವರೆಗೆ ಪುತ್ತಿಲ ಸೇರ್ಪಡೆ ವಿಚಾರದಲ್ಲಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.


ಸಭೆಯಲ್ಲಿ ಯಾವುದೇ ಕಾರಣಕ್ಕೂ ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಬಾರದು ಬೇಕಾದರೆ ಹೊರಗಿನಿಂದ ಬೆಂಬಲ ನೀಡಲಿ ಎಂಬ ಬಲವಾದ ಆಗ್ರಹ ಕೆಲವು ಮುಖಂಡರಿಂದ ವ್ಯಕ್ತಗೊಂಡಿದೆ. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಆ‌ರ್.ಎಸ್‌.ಎಸ್ ಮುಖಂಡರ ನೇತೃತ್ವದಲ್ಲಿ ಮಾರ್ಚ್ 16ರಂದು ಪುತ್ತೂರಿನಲ್ಲಿ ಸಂಘಪರಿವಾರದ ತುರ್ತು ಬೈಠಕ್ ನಡೆಯಲಿದೆ ಎಂದು ಹೇಳಲಾಗಿದೆ. ಈ ಬೈಠಕ್‌ನಲ್ಲಿ ಜಿಲ್ಲಾಧ್ಯಕ್ಷರ ಸಹಿತ ಮಂಡಲ, ನಗರ ಹಾಗೂ ಇತರೆ ಪದಾಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪುತ್ತಿಲ ಪರಿವಾರ ಪ್ರತ್ಯೇಕವಾಗಿಯೇ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಲಿ, ಲೋಕಸಭಾ ಚುನಾವಣೆ ಬಳಿಕ ಮುಂದೆ ಪಕ್ಷ ಸೇರ್ಪಡೆ ಬಗ್ಗೆ ಪರಿಶೀಲಿಸಿದರೆ ಒಳಿತು ಎಂಬ ನಿರ್ಧಾರಕ್ಕೆ ಬರುವ ಬಗ್ಗೆ ಸ್ಥಳೀಯ ಮುಖಂಡರು ಅಭಿಪ್ರಾಯಿಸುವ ಸಾಧ್ಯತೆಯನ್ನು ಹೇಳಲಾಗಿದೆ.

ಇನ್ನು ಪುತ್ತಿಲ ಬಂಡಾಯದ ಬಳಿಕ ಬಿಜೆಪಿ ಹಾಗೂ ಪುತ್ತಿಲ ಪರಿವಾರದ ಕಾರ್ಯಕರ್ತರ ನಡುವಿನ ಸಂಘರ್ಷದಲ್ಲಿ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದೆ.  ಇದೇ ವಿಚಾರವನ್ನು ಪುತ್ತೂರಿನ ಬಿಜೆಪಿ ಸಭೆಯಲ್ಲಿ ಅಧ್ಯಕ್ಷರ ಮುಂದಿಡಲಾಗಿದ್ದು, ಎಲ್ಲಾ ಕೇಸ್ ಗಳನ್ನು ವಾಪಾಸ್ ಪಡೆಯಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು. ಈ ನಡುವೆ ದಕ್ಷಿಣಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿದ್ದು ನಾವಲ್ಲ ಅದು ಮಾಧ್ಯಮದವರು ಎಂದು ಹೇಳಿ ನೀಡುವ ಮೂಲಕ ಉಲ್ಟಾ ಹೊಡೆದಿದ್ದರು. ಒಟ್ಟಾರೆಯಾಗಿ ಪುತ್ತಿಲ ಪರಿವಾರ ಹಾಗೂ ಬಿಜೆಪಿ ಸೇರ್ಪಡೆ ಸದ್ಯಕ್ಕೆ ರದ್ದಾಗಿದ್ದು, ಇದು ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *