LATEST NEWS
ಪುತ್ತಿಲ ಪರಿವಾರದ ಬಿಕ್ಕಟ್ಟು – ಪುತ್ತೂರು ಮಂಡಲ ನೇಮಕ ವಿಳಂಬ

ಮಂಗಳೂರು ಫೆಬ್ರವರಿ 04: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಹೊಸ ಪದಾಧಿಕಾರಿಗಳ ಪಟ್ಟಿ ಶನಿವಾರ ಪ್ರಕಟವಾಗಿದ್ದು, ಪುತ್ತೂರು ಹೊರತುಪಡಿಸಿ ಜಿಲ್ಲೆಯ ಏಳು ಮಂಡಲಗಳ ಅಧ್ಯಕ್ಷರ ಹೆಸರು ಘೋಷಿಸಲಾಗಿದೆ. ಪುತ್ತೂರಲ್ಲಿ ಪುತ್ತಿಲ ಪರಿವಾರದ ಬಿಕ್ಕಟ್ಟು ಶಮನ ಪ್ರಯತ್ನ ಹಿನ್ನೆಲೆಯಲ್ಲಿ ಅಲ್ಲಿನ ಮಂಡಲ ಅಧ್ಯಕ್ಷರ ಘೋಷಣೆಯನ್ನು ಪಕ್ಷದ ವರಿಷ್ಠರು ತಡೆಹಿಡಿದಿದ್ದಾರೆ.
ಪುತ್ತೂರು ಮಂಡಲಕ್ಕೆ ಬಿಜೆಪಿ ಅಧ್ಯಕ್ಷರ ನೇಮಕ ಮೂರ್ನಾಲ್ಕು ದಿನಗಳ ಕಾಲ ವಿಳಂಬವಾಗಲಿದೆ. ವಿಧಾನ ಸಭೆ ಚುನಾವಣೆಯ ವೇಳೆ ಬಿಜೆಪಿ ವಿರುದ್ದ ಬಂಡಾಯದ ಬಾವುಟ ಹಾರಿಸಿದ್ದ ಅರುಣ್ ಕುಮಾರ್ ಪುತ್ತಿಲ, ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ಕಳುಹಿಸಿದ್ದರು. ಈ ನಡುವೆ ಬಿಕ್ಕಟ್ಟು ಶಮನಕ್ಕೆ ಪ್ರಯತ್ನ ನಡೆಯುತ್ತಿರುವ ಹಿನ್ನೆಲೆ ಹಾಗೂ ಫೆಬ್ರವರಿ5ರಂದು ಪುತ್ತೂರಲ್ಲಿ ಪುತ್ತಿಲ ಪರಿವಾರದ ನಿರ್ಣಾಯಕ ಸಮಾಲೋಚನಾ ಸಭೆ ನಡೆಯುವುದರಿಂದ ಕಾದು ನೋಡುವ ತಂತ್ರಗಾರಿಕೆಗೆ ಬಿಜೆಪಿ ಮೊರೆ ಹೋಗಿದೆ.

ಶನಿವಾರ ಬಿಡುಗಡೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಪದಾಧಿಕಾರಿಗಳ ಮೊದಲ ಪಟ್ಟಿಯಲ್ಲಿ ಪುತ್ತೂರು ಮಂಡಲ ಅಧ್ಯಕ್ಷರ ಹೆಸರು ಪ್ರಕಟವಾಗಿಲ್ಲ. ಪಕ್ಷದ ನಾಯಕರ ಸೂಚನೆ ಮೇರೆಗೆ ತಾತ್ಕಾಲಿಕ ತಡೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ. ಇದೀಗ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಹೊರಬಿದ್ದಿದ್ದು, ಇನ್ನು ಪುತ್ತೂರು ಮಂಡಲ ಪದಾಧಿಕಾರಿಗಳ ಪಟ್ಟಿ ಪ್ರಕಟ ಮಾತ್ರ ಬಾಕಿ ಉಳಿದಿದೆ. ಹಾಗಾಗಿ ಪುತ್ತಿಲ ಪರಿವಾರ ಜತೆಗಿನ ಬಿಕ್ಕಟ್ಟು ಶಮನಕ್ಕೆ ಕೊನೆ ಅವಕಾಶ ಎನ್ನಲಾಗಿದ್ದು, ಸರಿಹೋದರೆ, ಅರುಣ್ ಕುಮಾರ್ ಪುತ್ತಿಲರನ್ನು ಬಿಜೆಪಿಗೆ ಬರಮಾಡಿಕೊಂಡು ಪುತ್ತೂರು ಮಂಡಲದ ಜವಾಬ್ದಾರಿ ನೀಡುವ ಸಂಭವ ಇದೆ. ಅಂತಿಮ ಮಾತುಕತೆ ಮುರಿದುಬಿದ್ದರೆ, ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನ ಪಕ್ಷದ ಸಕ್ರಿಯರೊಬ್ಬರ ಹೆಗಲೇರಲಿದೆ ಎಂದು ಮೂಲಗಳು ತಿಳಿಸಿವೆ.