DAKSHINA KANNADA
ಪೊಲೀಸ್ ದೌರ್ಜನ್ಯಕ್ಕೆ ಹಿಂದೂ ಕಾರ್ಯಕರ್ತನ ಕಿವಿ ತಮಟೆಗೆ ಹಾನಿ- ತೀವ್ರ ಸ್ವರೂಪದ ಹೋರಾಟದ ಎಚ್ಚರಿಕೆ ನೀಡಿದ ಪುತ್ತಿಲ
ಪುತ್ತೂರು ಮೇ 23 : ಸಂಸದ ನಳಿನ್ ಹಾಗೂ ಡಿವಿ ಸದಾನಂದ ಗೌಡ ಅವರ ಬ್ಯಾನರ್ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿದ್ದ ಹಿಂದೂ ಕಾರ್ಯಕರ್ತನ ಕಿವಿಯ ತಮಟೆಗೆ ತೀವ್ರ ಹಾನಿಯಾಗಿದೆ ಎಂಬ ವೈದಕೀಯ ವರದಿ ಬಂದಿದ್ದು ವರದಿಗಳು ವೈರಲ್ ಆಗುತ್ತಿದ್ದಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ದ.ಕ ಜಿಲ್ಲಾ ಎಸ್ಪಿಯವರನ್ನು ಭೇಟಿಯಾಗಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಪ್ರಕರಣ ಪುತ್ತೂರು ಬಸ್ಸು ನಿಲ್ದಾಣದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಜನರನ್ನು ಬಂಧಿಸಿದ್ದರು. ಬಂಧಿತರನ್ನು ಅರುಣ್ ಕುಮಾರ್ ಪುತ್ತಿಲ ಮಧ್ಯರಾತ್ರಿ ಹೋಗಿ ಬಿಡಿಸಿಕೊಂಡು ಬಂದಿದ್ದರು, ಈ ವೇಳೆ ಪೊಲೀಸರ ದೌರ್ಜನ್ಯಕ್ಕೆ ಇಬ್ಬರು ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು.
ಘಟನೆ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಪುತ್ತೂರಿನ ಡಿವೈಎಸ್ಪಿ, ಸಂಪ್ಯ ಠಾಣೆಯ ಎಸ್ಐ ಮತ್ತು ಪೊಲೀಸ್ ಸಿಬಂದಿ ಒಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಂಪ್ಯ ಠಾಣೆ ಎಸ್ಐ ಮತ್ತು ಸಿಬಂದಿಯನ್ನು ಅಮಾನತು ಮಾಡಿ, ಡಿವೈಎಸ್ಪಿಯನ್ನು ರಜೆಯಲ್ಲಿ ಕಳುಹಿಸಲಾಗಿತ್ತು.
ತೀವ್ರ ಗಾಯಗೊಂಡಿದ್ದ ಅವಿನಾಶ್ ಕಿವಿ ನೋವು ಕಡಿಮೆಯಾಗದ ಕಾರಣ ಕಿವಿಯ ಸ್ಕ್ಯಾನಿಂಗ್ ಮಾಡಿದ್ದು ತಮಟೆ ಹರಿದ ಬಗ್ಗೆ ವೈದ್ಯಕೀಯ ವರದಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅರುಣ್ ಪುತ್ತಿಲ ಅವರು ದಕ್ಷಿಣ ಕನ್ನಡ ಎಸ್ಪಿ ವಿಕ್ರಂ ಅಮಾಟೆಯನ್ನು ಭೇಟಿಯಾಗಿದ್ದು ಎರಡು ದಿನದೊಳಗೆ ಹಲ್ಲೆ ನಡೆಸಿರುವ ಡಿವೈಎಸ್ಪಿ ಅಧಿಕಾರಿಯನ್ನು ಅಮಾನತು ಮಾಡಬೇಕು ಮತ್ತು ಸಂತ್ರಸ್ತರಿಗೆ 5 ಲಕ್ಷದಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕ್ರಮ ಜರುಗಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.