BANTWAL
ಅಕ್ಷಯಪಾತ್ರದಿಂದ ಹಸಿವು ನೀಗುವುದರ ಜೊತೆ ಪುಣ್ಯ ಸಂಪಾದನೆಯ ಕಾರ್ಯ : ಪುತ್ತಿಗೆ ಸುಗುಣೇಂದ್ರ ಶ್ರೀಗಳು
ಬಂಟ್ವಾಳ ಡಿಸೆಂಬರ್ 04 : ಅಕ್ಷಯಪಾತ್ರ ಫೌಂಡೇಶನ್ ವತಿಯಿಂದ ಕೃಷ್ಣನ ಪ್ರಸಾದವನ್ನು ಮಕ್ಕಳಿಗೆ ವಿತರಿಸುವ ಸತ್ಕಾರ್ಯವನ್ನು ಹಲವು ವರ್ಷಗಳಿಂದ ನಡೆಯುತ್ತಿದೆ. ಇಸ್ಕಾನ್ ಫೌಂಡೇಶನ್ ಮೂಲಕ ಇಡೀ ದೇಶದಲ್ಲಿ 23 ಲಕ್ಷ ಮಂದಿಗೆ ಮಧ್ಯಾಹ್ನದ ಊಟ ತಲುಪುತ್ತಿದ್ದು, ಇದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ. ಅಕ್ಷಯಪಾತ್ರ ನೀಡುವ ಸಾತ್ವಿಕ ಆಹಾರದ ಮೂಲಕ ಮಕ್ಕಳಿಗೆ ಆದ್ಯಾತ್ಮಿಕ ಸಾಧನೆಯನ್ನು ನೀಡುವ ಕಾರ್ಯವನ್ನು ಇಸ್ಕಾನ್ ನಡೆಸುತ್ತಿದೆ. ಗ್ರಾಮೀಣ ಭಾಗದಲ್ಲಿ ತಲೆ ಎತ್ತಿನಿಂತಿರುವ ಈ ಘಟಕ ಯಶಸ್ವಿಯಾಗಿ ನಡೆಯಲಿ. ಇಸ್ಕಾನ್ ಮೂಲಕ ಕೃಷ್ಣನ ಪ್ರಸಾದದ ರವಾನೆ ಇಡೀ ಪ್ರಪಂಚಾದಾದ್ಯಂತ ನಡೆಯಲಿ ಎಂದು ಶುಭಹಾರೈಸುತ್ತೇನೆ ಎಂದು ಉಡುಪಿಯ ಪುತ್ತಿಗೆ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಹೇಳಿದರು.
ಅವರು ಬಂಟ್ವಾಳದ ಬೆಂಜನಪದವಿನಲ್ಲಿ ನಿರ್ಮಿಸಿರುವ ಕೇಂದ್ರೀಕೃತ ಅಡುಗೆಮನೆಗೆ ಆದಿತ್ಯವಾರ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಅಕ್ಷಯ ಪಾತ್ರ ಫೌಂಡೇಶನ್ನಿನ ಅಧ್ಯಕ್ಷ ಮಧು ಪಂಡಿತ್‌ದಾಸ ಮಾತನಾಡಿ ಮಂಗಳೂರಿನಲ್ಲಿ ನಮ್ಮ ಅತ್ಯಾಧುನಿಕ ಅಡುಗೆಮನೆಯ ಪ್ರಾರಂಭವು ಅಕ್ಷಯ ಪಾತ್ರ ಫೌಂಡೇಶನ್ನ ಪ್ರಗತಿಯನ್ನು ಸೂಚಿಸುತ್ತದೆ. ಮಕ್ಕಳ ಕಲ್ಯಾಣ ಮತ್ತು ಸಮುದಾಯದ ಅಭಿವೃದ್ಧಿಯಲ್ಲಿ ನಮ್ಮ ಬದ್ಧತೆ ಪ್ರತಿಬಿಂಬವಾಗಿದೆ. ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಶಿಕ್ಷಣ ಸಚಿವಾಲಯ, ಸರ್ಕಾರದಿಂದ ನಿರಂತರ ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದರು.
ಮಂಗಳೂರು ಅಧ್ಯಕ್ಷ ಗುಣಕರ ರಾಮದಾಸ್ ನೂತನವಾದ ಅಡುಗೆ ಕೋಣೆಯು 124 ಸರ್ಕಾರಿ ಮತ್ತು 41 ಸರ್ಕಾರಿ ಅನುದಾನಿತ ಸಂಸ್ಥೆಗಳು ಸೇರಿದಂತೆ 165 ಕ್ಕೂ ಹೆಚ್ಚು ಶಾಲೆಗಗಳಿಗೆ ಅಗತ್ಯ ಪೌಷ್ಟಿಕಯುತವಾದ 25 ಸಾವಿರ ಊಟವನ್ನು ಉತ್ಪಾದಿಸುವ ಸಾಮರ್ಥ್ಯದೊಂದಿಗೆ ಈ ಅಡುಗೆಕೋಣೆ ರೂಪುಗೊಂಡಿದೆ. ಅಡುಗೆಮನೆಯ ವೈವಿಧ್ಯಮಯ ಮೆನುವು ಸಮತೋಲಿತ ಪೋಷಣೆಯನ್ನು ಖಾತ್ರಿಗೊಳಿಸುತ್ತದೆ. ಸೌರಶಕ್ತಿ ಮತ್ತು ಸ್ವಚ್ಛತೆ ಯೊಂದಿಗೆ ಪರಿಸರಸ್ನೇಹಿ ಅಡುಗೆಮನೆ ಇದಾಗಿದೆ ಎಂದು ತಿಳಿಸಿದರು.