LATEST NEWS
ಕೃಷಿ ಕಾಯ್ದೆ ವಿರುದ್ದ ಸುಪ್ರೀಂ ಕೋರ್ಟ್ ಗರಂ..ನೀವು ನಿಲ್ಲಿಸದೇ ಹೋದರೆ ನಾವು ತಡೆಹಿಡಿಯುತ್ತೇವೆ….!!
ನವದೆಹಲಿ ಜನವರಿ 11: ಕೇಂದ್ರ ಸರಕಾರದ ವಿವಾದಿತ ಕೃಷಿ ಕಾಯ್ದೆ ವಿರುದ್ದ ಸುಪ್ರೀಂ ಕೋರ್ಟ್ ಗರಂ ಆಗಿದ್ದು, ಕೃಷಿ ಕಾನೂನುಗಳ ಅನುಷ್ಠಾನವನ್ನು ಕೇಂದ್ರ ಸರ್ಕಾರವು ನಿಲ್ಲಿಸದೇ ಹೋದರೆ, ನಾವು ಅದನ್ನು ತಡೆಹಿಡಿಯುತ್ತೇವೆ ಎಂದು ತಿಳಿಸಿದೆ.
ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆ ರದ್ದಿಗೆ ಆಗ್ರಹಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ವಿವಿಧ ರೈತ ಸಂಘಟನೆಗಳ ಅರ್ಜಿ ವಿಚಾರಣೆ ವೇಳೆ ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿವಿಧ ರೈತ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಮಾತುಕತೆ ಪ್ರಕ್ರಿಯೆ ತೀವ್ರ ನಿರಾಸೆ ತಂದಿದೆ ಎಂದು ಸೋಮವಾರ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಲ್ಲದೆ ಕೃಷಿ ಕಾನೂನುಗಳ ಅನುಷ್ಠಾನವನ್ನು ಕೇಂದ್ರ ಸರ್ಕಾರವು ನಿಲ್ಲಿಸದೇ ಹೋದರೆ, ನಾವು ಅದನ್ನು ತಡೆಹಿಡಿಯುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಬೋಬಡೆ ಹೇಳಿದ್ದಾರೆ.
ಸಮಸ್ಯೆಗಳ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಈ ಸಮಯದಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಮಾತನಾಡುತ್ತಿಲ್ಲ. ಕಾನೂನುಗಳನ್ನು ರದ್ದುಗೊಳಿಸುವ ವಿಚಾರವನ್ನು ‘ಇದು ಬಹಳ ಸೂಕ್ಷ್ಮವಾದ ಸಂಗತಿ‘ ಎಂದು ಹೇಳಿರುವ ನ್ಯಾಯಪೀಠ ‘ಈ ಕೃಷಿ ಕಾನೂನುಗಳು ಪ್ರಯೋಜನಕಾರಿ ಎಂದು ಹೇಳುವ ಒಂದೇ ಒಂದು ಅರ್ಜಿಯೂ ನಮ್ಮ ಮುಂದೆ ಇಲ್ಲ‘ ಎಂದು ತಿಳಿಸಿದೆ.