DAKSHINA KANNADA
ಪುಂಜಾಲಕಟ್ಟೆ – ಶಾಲಾ ಬಾಲಕನಿಗೆ ಎಸ್‌ಡಿಎಂಸಿ ಅಧ್ಯಕ್ಷನಿಂದ ಹಲ್ಲೆ
ಪುಂಜಾಲಕಟ್ಟೆ ಡಿಸೆಂಬರ್ 02: ಶಾಲಾ ಬಾಲಕನೋರ್ವ ಸೈಕಲ್ ಕಳ್ಳತನ ಮಾಡಿ ಮಾರಾಟ ಮಾಡಿರುವುದಾಗಿ ಆರೋಪಿಸಿ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಅಧ್ಯಕ್ಷ ಬಾಲಕನಿಗೆ ಹಲ್ಲೆ ಗೈದಿದ್ದು, ಬಾಲಕ ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ ರಂದು ಸಂಭವಿಸಿದೆ.
ಸಂತ್ರಸ್ಥ ಬಾಲಕ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿಕೊಂಡಿದ್ದು, ಬಾಲಕನು ಸೈಕಲನ್ನು ಮಾರಾಟ ಮಾಡಿದ ವಿಚಾರಕ್ಕೆ ಸಂಬಂದಿಸಿದಂತೆ ನವೆಂಬರ್ 28ರಂದು ಬೆಳಗ್ಗೆ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಆರೋಪಿತ ಪರಮೇಶ ಎಂಬಾತ ಬಾಲಕನನ್ನು ವಿಚಾರಿಸಿ ಬಾಲಕನ ತಾಯಿಯ ಸಮಕ್ಷಮದಲ್ಲಿ ಬಾಲಕನಿಗೆ ಸಣ್ಣ ದೊಣ್ಣೆಯಿಂದ ಹಾಗೂ ಕೈಯಿಂದ ಹೊಡೆದಿರುತ್ತಾನೆ.
ಈ ವೇಳೆ ಶಾಲಾ ಶಿಕ್ಷಕರಾದ ಪ್ರಮೀಳಾ ಮತ್ತು ರಮೇಶ್ ಎಂಬವರು ಬಾಲಕನಿಗೆ ಹೊಡೆಯಲು ಪ್ರೇರೇಪಿಸಿರುತ್ತಾರೆ. ಹಲ್ಲೆ ನಡೆಸಿದ ಬಳಿಕ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸೈಕಲ್ ಕದ್ದು ಮಾರಾಟ ಮಾಡಿದ ಬಗ್ಗೆ ಕೇಸು ಹಾಕುವುದಾಗಿ ಬೆದರಿಕೆ ಹಾಕಿದ್ದು, ಶಾಲೆಯಲ್ಲಿ ನಡೆದ ಹಲ್ಲೆಯಿಂದ ನ30 ರಂದು ಬೆಳಗ್ಗೆ ಬಾಲಕನಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿರುತ್ತಾರೆ ಎಂಬುದಾಗಿ ಸಂತ್ರಸ್ಥ ಬಾಲಕನು ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಬಾಲನ್ಯಾಯ ಕಾಯಿದೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.