LATEST NEWS
ಪುಣೆ – ಬಸ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್

ಮುಂಬೈ ,ಫೆಬ್ರವರಿ 28: ಪುಣೆಯ ಬಸ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು 75 ಗಂಟೆಗಳ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದತ್ತಾತ್ರಯ ರಾಮದಾಸ್ ಗಾಡೆ(36) ಎಂದು ಗುರುತಿಸಲಾಗಿದ್ದು, ಮಹರಾಷ್ಟ್ರದ ಶಿರೂರು ತಹಸಿಲ್ ನಲ್ಲಿ ಅರೆಸ್ಟ್ ಮಾಡಿದ್ದಾರೆ.
ಪುಣೆಯ ಸ್ಟಾರ್‌ಗೇಟ್ ಬಸ್ ಡಿಪೋದಲ್ಲಿ ನಿಂತಿದ್ದ ಬಸ್‌ನಲ್ಲಿ 26 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಆರೋಪಿ ಪರಾರಿಯಾಗಿದ್ದ. ಆತನ ಪತ್ತೆಗೆ ಪುಣೆ ಪೊಲೀಸರು ಡೋನ್‌ಗಳು ಮತ್ತು ಶ್ವಾನದಳವನ್ನು ಗುಣತ್ ಗ್ರಾಮ ಮತ್ತು ಚಿಂಚ್ಚಿ ಅಣೆಕಟ್ಟಿನ ಹಿನ್ನೀರಿನ ಉದ್ದಕ್ಕೂ ನಿಯೋಜಿಸಿದ್ದರು. ಅಲ್ಲದೆ, ಆರೋಪಿ ಬಗ್ಗೆ ಸುಳಿವು ನೀಡುವವರಿಗೆ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಪುಣೆ ಜಿಲ್ಲೆಯ ಶಿರೂರು ತಹಸಿಲ್‌ನ ಗುಣತ್ ಗ್ರಾಮದ ಸಮೀಪದಲ್ಲಿ ಪುಣೆ ಸಿಟಿ ಪೊಲೀಸರು, ಪುಣೆ ಗ್ರಾಮಾಂತರ ಪೊಲೀಸರು ಮತ್ತು ಸಿಐಡಿ ಅಪರಾಧ ವಿಭಾಗದ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

ಗಾಡೆಯನ್ನು ಶಿರೂರು ತಹಸಿಲ್‌ನಲ್ಲಿ ಗುರುವಾರ ಮಧ್ಯರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಆತನನ್ನು ಲಷ್ಕರ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಸದ್ಯ, ವಿಚಾರಣೆ ನಡೆಸುತ್ತಿರುವ ಪೊಲೀಸರು, ಅಧಿಕೃತ ಬಂಧನಕ್ಕೊಳಪಡಿಸುವ ಮೊದಲು ಸಾಸೂನ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ.