LATEST NEWS
ಶಬರಿಮಲೆ ತೀರ್ಪಿನ ವಿರುದ್ಧ ಮಂಗಳೂರಿನಲ್ಲಿ ಅಕ್ಟೋಬರ್ 9ರಂದು ಬೃಹತ್ ಸಭೆ
ಶಬರಿಮಲೆ ತೀರ್ಪಿನ ವಿರುದ್ಧ ಮಂಗಳೂರಿನಲ್ಲಿ ಅಕ್ಟೋಬರ್ 9ರಂದು ಬೃಹತ್ ಸಭೆ
ಮಂಗಳೂರು ಅಕ್ಟೋಬರ್ 7: ಶಬರಿಮಲೆ ಪ್ರವೇಶ ಕುರಿತಂತೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಸುಪ್ರಿಂಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಬೃಹತ್ ಹೋರಾಟ ನಡೆಸಲು ಮಂಗಳೂರಿನ ಅಯ್ಯಪ್ಪ ಸೇವಾ ಸಮಿತಿ ನಿರ್ಧರಿಸಿದೆ.
ನಗರದ ಸಂಘನಿಕೇತನದಲ್ಲಿ ನಡೆದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಈ ಕುರಿತಂತೆ ತೀರ್ಮಾನ ಕೈಗೊಳ್ಳಲಾಯಿತು. ಮೊದಲ ಹಂತವಾಗಿ ಅಕ್ಟೋಬರ್ 9 ರಂದು ಸಂಜೆ 5 ಗಂಟೆಗೆ ಕದ್ರಿ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಹಿಂದು ಬಾಂಧವರು ಒಟ್ಟು ಸೇರಿ ಹೋರಾಟದ ರೂಪುರೇಷೆಯ ಸಭೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್., ಇಡೀ ದೇಶವನ್ನು ಒಗ್ಗೂಡಿಸಿದ ಶಕ್ತಿಯ ಕ್ಷೇತ್ರವೆಂದರೆ ಅದು ಶಬರಿಮಲೆ. ಅತ್ಯಂತ ಶ್ರದ್ಧಾ ಭಕ್ತಿಯಿಂದ ಕೋಟ್ಯಂತರ ಮಂದಿ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಆದರೆ ಪರಂಪರೆಯಿಂದ ಬಂದ ಜನತೆಯ ನಂಬಿಕೆಗೆ ಧಕ್ಕೆ ತರುವ ಕೆಲಸ ಸುಪ್ರಿಂ ಕೋರ್ಟ್ ತೀರ್ಪಿನ ಮೂಲಕ ಆಗಿದೆ. ಕೇರಳ ಸರಕಾರ ತೀರ್ಪಿನ ಮರು ಪರಿಶೀಲನೆಗೆ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲೇಬೇಕು. ಭಕ್ತರ ಧಾರ್ಮಿಕ ಭಾವನೆಗೆ ಮೊದಲ ಅವಕಾಶ ನೀಡಬೇಕು. ಅಷ್ಟರವರೆಗೆ ಹೋರಾಟ ನಿಲ್ಲಬಾರದು ಎಂದರು.
ಹಿಂದು ಸಮಾಜ ಮಹಿಳಾ ವಿರೋಧಿಯಲ್ಲ, ಶಬರಿಮಲೆಗೆ ಮಹಿಳೆಯರಿಗೆ ನಿಷೇಧವನ್ನೂ ಹೇರಿಲ್ಲ. 10 ನೇ ವಯಸ್ಸಿನೊಳಗಿನ ಮತ್ತು 50 ವರ್ಷ ಮೇಲ್ಪಟ್ಟ ಮಹಿಳೆಯರು ಶಬರಿ ಮಲೆಗೆ ಬರಲು ಹಿಂದಿನಿಂದಲೂ ಅವಕಾಶವಿದೆ. ಆದರೆ ಶಬರಿಮಲೆ ಏನೆಂದೇ ಗೊತ್ತಿರದ ಮಂದಿ ಕೋರ್ಟ್ ಮೆಟ್ಟಿಲೇರುವ ಮೂಲಕ ಪರಂಪರೆಗೆ ಪೆಟ್ಟು ನೀಡುವ ಕೆಲಸ ಮಾಡಿದ್ದಾರೆ. ಹಿಂದು ಸಮಾಜವನ್ನು ಮುನ್ನಡೆಸಬೇಕಾದ ಸಂತ ಶ್ರೇಷ್ಟರ ಧಾರ್ಮಿಕ ವಿಚಾರದ ಕುರಿತು ನಿರ್ಧಾರ ತೆಗೆದುಕೊಳ್ಳುವಂತಾಗಬೇಕು ಎಂದವರು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್, ವಿಶ್ವಹಿಂದು ಪರಿಷತ್ ದಕ್ಷಿಣ ಪ್ರಾಂತ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಆರೆಸ್ಸೆಸ್ ಮಹಾನಗರ ಸಂಘಚಾಲಕ್ ಸುನಿಲ್ ಆಚಾರ್, ಬಜರಂಗದಳ ಪ್ರಾಂತ ಸಂಚಾಲಕ ಶರ್‌ಪಂಪ್‌ವೆಲ್ ಮತ್ತಿತರರು ಉಪಸ್ಥಿತರಿದ್ದರು.